ಬೆಂಗಳೂರು: ಇಂದಿನಿಂದ 6 ರಿಂದ 8ನೇ ತರಗತಿಗಳು ಆರಂಭವಾಗಿವೆ. ಈ ಮೂಲಕ ಕಳೆದೊಂದು ವರ್ಷದಿಂದ ಮನೆಯಲ್ಲಿದ್ದ ಮಕ್ಕಳು ಇದೀಗ ಶಾಲೆಯತ್ತ ತೆರಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆ ತೆರೆಯಲು ಅವಕಾಶ ನೀಡಲಾಗಿದೆ. ಪಾಸಿಟಿವಿಟಿ ದರ ಶೇಕಡಾ 2ಕ್ಕಿಂತ ಹೆಚ್ಚಿರುವ ಗಡಿ ಜಿಲ್ಲೆಗಳಲ್ಲಿ ತರಗತಿಗಳು ಆರಂಭಗೊಂಡಿಲ್ಲ. ಅಂತಹ ಕಡೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದ ಮೇಲೆ ಆ ಬಗ್ಗೆ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಈಗಾಗಲೇ ರಾಜ್ಯದಲ್ಲಿ 9 ರಿಂದ 12ನೇ ತರಗತಿಗಳು ಆರಂಭವಾಗಿದ್ದು ಅದಕ್ಕೆ ಉತ್ತಮ ಸ್ಪಂದನೆ ಸಿಕ್ಕ ಹಿನ್ನೆಲೆಯಲ್ಲಿ ಇಂದಿನಿಂದ 6 ರಿಂದ 8ನೇ ತರಗತಿಗಳು ಆರಂಭವಾಗಲಿವೆ.
ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಇಂದಿನಿಂದ ಮೂರು ದಿನ ಶಾಲೆಗಳನ್ನು ನಡೆಸಿದ ನಂತರ ಮತ್ತೆ ಮೂರು ದಿನ ಗಣೇಶ ಹಬ್ಬದ ರಜೆ ಇರಲಿದೆ. ಆಗ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರಿಂದ ಸಿಗುವ ಅಭಿಪ್ರಾಯವನ್ನು ಪಡೆದುಕೊಂಡು ಮುಂದಿನ ಸೋಮವಾರ ಮುಂದಿನ ನಿರ್ಧಾರವನ್ನು ತಿಳಿಸಲಾಗುವುದು ಎಂದು ಹೇಳಿದರು.