ಇಂಧೋರ್ ಏರ್‌ಪೋರ್ಟ್‌ನಲ್ಲಿ ಮಂಗಳೂರು ಮಾದರಿಯ ‘ಬಾಂಬ್’ ಪ್ರಹಸನ
ಇಂಧೋರ್/ ಮಧ್ಯಪ್ರದೇಶ: ಭದ್ರತಾ ತಪಾಸಣೆ ವೇಳೆ ವ್ಯಕ್ತಿಯೊಬ್ಬ ‘ಬ್ಯಾಗ್‌ನಲ್ಲಿ ಬಾಂಬ್ ಇದೆ’ ಎಂದು ‘ಜೋಕ್’ ಮಾಡಿ ಇಡೀ ಕುಟುಂಬವೇ ಸಂಕಷ್ಟಕ್ಕೀಡಾದ ಘಟನೆ ಇಲ್ಲಿನ ದೇವಿ ಅಹಲ್ಯಬಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ವ್ಯಕ್ತಿ, ಆತನ ಪತ್ನಿ ಮತ್ತು ಮಗಳು ವಿಮಾನ ಯಾತ್ರೆಯ ಹೊರಟಿದ್ದು, ಭದ್ರತಾ ತಪಾಸಣೆಯ ವೇಳೆ ಈ ವ್ಯಕ್ತಿಯು ‘ಬ್ಯಾಗ್‌ನಲ್ಲಿ ಬಾಂಬ್ ಇದೆ’ ಎಂದು ಹಾಸ್ಯದ ಸಲುವಾಗಿ ಹೇಳಿದ್ದರು. ಕೂಡಲೇ ಜಾಗೃತರಾದ ಸಿಬ್ಬಂದಿಗಳು ಕುಟುಂಬ ಮೂವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ಕಾರಣದಿಂದಾಗಿ ಅವರ ವಿಮಾನ ಯಾತ್ರೆಯೂ ರದ್ದಾಗಿದೆ.
ಅವರ ಲಗೇಜ್‌ಗಳನ್ನು ತಪಾಸಣೆಗೊಳಪಡಿಸಿದ್ದಲ್ಲದೇ, ಕುಟುಂಬವನ್ನೂ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಸಿ.ವಿ ರವೀಂದ್ರನ್ ಹೇಳಿದ್ದಾರೆ.
ತಪಾಸಣೆಯ ವೇಳೆ ವ್ಯಕ್ತಿಯು ಕ್ಷಮೆ ಕೇಳಿದ್ದಾರೆ ಅಲ್ಲದೇ ಅವರ ಲಗೇಜ್‌ಗಳಲ್ಲಿ ಯಾವುದೇ ನಿಷೇಧಿತ ವಸ್ತುಗಳು ಸಿಕ್ಕಿಲ್ಲ ಎಂದು ರವೀಂದ್ರನ್ ಹೇಳಿದ್ದಾರೆ.
ಬಳಿಕ ಮೂವರನ್ನೊಳಗೊಂಡ ಕುಟುಂಬವನ್ನು ಏರ್‌ಪೋರ್ಟ್‌ನಿಂದ ಹೊರ ಹೋಗಲು ಸಿಐಎಸ್ಎಫ್ ಸಿಬ್ಬಂದಿಗಳು ಅನುಮತಿ ನೀಡಿದ್ದಾರೆ.