ಲಕ್ನೋ: ಯುವತಿಯಿಂದ 22 ಬಾರಿ ಪೆಟ್ಟು ತಿಂದ ಕ್ಯಾಬ್ ಚಾಲಕರೊಬ್ಬರು ಪುರುಷರ ಪರ ಧ್ವನಿ ಎತ್ತಲು ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ.
ಮಹಿಳೆಯೊಬ್ಬರಿಂದ ಥಳಿತಕ್ಕೊಳಪಟ್ಟು ಬಳಿಕ ಚರ್ಚೆಗೆ ಗ್ರಾಸವಾಗಿದ್ದ ಕ್ಯಾಬ್ ಚಾಲಕ ಸಾದತ್ ಅಲಿ ಇದೀಗ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಸಹೋದರ ಶಿವಪಾಲ್ ಸಿಂಗ್ ಯಾದವ್ ರಚಿಸಿದ ಪ್ರಗತಿಶೀಲ ಸಮಾಜವಾದಿ ಪಕ್ಷಕ್ಕೆ ಸೇರಲಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಾದಾತ್ ಅಲಿ, ಪುರುಷರ ಪರ ಧ್ವನಿ ಎತ್ತಲು ರಾಜಕೀಯಕ್ಕೆ ಬಂದಿದ್ದೇನೆ ಮತ್ತು ದೇಶದಲ್ಲಿ ಮಹಿಳೆಯರಿಂದ ಕಿರುಕುಳಕ್ಕೊಳಗಾದ ಪುರುಷರಿಗಾಗಿ ಕೆಲಸ ಮಾಡಲು ಬಯಸುತ್ತೇನೆ. ಅಷ್ಟೇ ಅಲ್ಲದೆ ದೇಶಾದ್ಯಂತ ಇರುವ ಕ್ಯಾಬ್ ಡ್ರೈವರ್ಗಳ ಜೊತೆಗೆ ನಿಲ್ಲುವುದಾಗಿ ತಿಳಿಸಿದ್ದಾರೆ.
ಈ ವರ್ಷ ಜುಲೈ 30 ರಂದು ಲಕ್ನೋದ ಬರಬಿರ್ವಾ ಛೇದಕದಲ್ಲಿ ಮಹಿಳೆ ಪ್ರಿಯದರ್ಶಿನಿ ಯಾದವ್, ಸಾದತ್ ಅಲಿ ಅವರಿಗೆ 22 ಬಾರಿ ಕಪಾಳಮೋಕ್ಷ ಮಾಡಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.