ಚೆನ್ನೈ: ರಾಜೀವ್ ಗಾಂಧಿ ಹಂತಕ ಎಜಿ ಪೆರಾರಿವಾಲನ್’ನನ್ನು ಬಿಡುಗಡೆಗೊಳಿಸುವಂತೆ ಸುಪ್ರೀಮ್ ಕೋರ್ಟ್ ಬುಧವಾರ ಆದೇಶಿಸಿದ ಬೆನ್ನಲ್ಲೇ, ಆತನ ತಾಯಿ ಅರ್ಪುತಮ್ಮಳ್ ಅವರು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಮತ್ತು ಇತರೆ ನಾಯಕರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ಈ ಕುರಿತು ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನನ್ನ ಮಗನ ಬಿಡುಗಡೆಗೆ ನಡೆಸಿದ ಹೋರಾಟದಲ್ಲಿ ನಮ್ಮನ್ನು ಬೆಂಬಲಿಸಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೇರಿದಂತೆ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ನನ್ನ ಮಗ ಸುದೀರ್ಘ 31 ವರ್ಷಗಳ ಕಾಲ ಜೈಲಿನಲ್ಲಿ ಕಳೆದ ನೋವುಗಳನ್ನು ನಾವು ಅನುಭವಿಸಿದ್ದೇವೆ. ಇದೀಗ ಅವನು ಇದೆಲ್ಲವನ್ನೂ ಮೀರಿದ್ದಾನೆ ಎಂದು ಅವರು ಗದ್ಗರಿತವಾಗಿ ನುಡಿದಿದ್ದಾರೆ.
31 ವರ್ಷಗಳಿಂದ ನನ್ನ ಮಗನಿಗೆ ನ್ಯಾಯ ದೊರಕಿಸಿಕೊಡಲು ಹೋರಾಟ ನಡೆಸಿದ್ದೇನೆ. ನೀವೆಲ್ಲರೂ ನನ್ನನ್ನು ಬೆಂಬಲಿಸಿದ್ದೀರಿ. ಅದಕ್ಕಾಗಿ ಧನ್ಯವಾದಗಳು. ಅದು ಬಿಟ್ಟರೆ ಬೇರೆ ಏನು ಹೇಳಬೇಕೆಂದು ನನಗೆ ತಿಳಿಯುತ್ತಿಲ್ಲ ಎಂದು ಅರ್ಪುತಮ್ಮಳ್ ಅವರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ತನ್ನ ಬಿಡುಗಡೆಗೆ ಆದೇಶಿಸಿದ ನಂತರ ಪೆರಾರಿವಾಲನ್ ಮತ್ತು ಅವರ ಕುಟುಂಬದ ಸದಸ್ಯರು ಜೋಲಾರ್‌ಪೇಟೆಯಲ್ಲಿರುವ ತಮ್ಮ ನಿವಾಸದ ಹೊರಗೆ ಸಿಹಿ ಹಂಚಿ ಸಂಭ್ರಮಿಸುತ್ತಿರುವುದು ವೈರಲ್ ವೀಡಿಯೋದಲ್ಲಿ ಸೆರೆಯಾಗಿದೆ.