ಲಕ್ನೋ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ ಅವರ ಅಧಿಕಾರ ಅವಧಿಯಲ್ಲಿ ನಿರ್ಮಾಣಗೊಂಡ ಆಗ್ರಾ – ಲಕ್ನೋ ಎಕ್ಸ್ ಪ್ರೆಸ್ ಹೈವೇ ಅನ್ನು ರಾಜ್ಯದ ಜನತೆಗೆ ಇಂದಿನ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಕೊಡುಗೆ ಎಂದು ಬಿಂಬಿಸಿದ ಸಂಸದ ತೇಜಸ್ವಿ ಸೂರ್ಯ, ನೆಟ್ಟಿಗರಿಂದ ಸಾರ್ವಜನಿಕವಾಗಿ ನಗೆಪಾಟಲಿಕ್ಕೀಡಾಗಿದ್ದಾರೆ.
ಕಾರೊಂದರಲ್ಲಿ ಹಾಡುಗಳಲ್ಲಿ ಹಾಕಿ ಪ್ರಯಾಣಿಸುವ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು, ಲಕ್ನೋ ದಿಂದ ಕನೌಜ್ ಗೆ ಪ್ರಯಾಣಿಸಲು ಮುಖ್ಯಮಂತ್ರಿ ಆದಿತ್ಯನಾಥ್ ಎಕ್ಸ್ ಪ್ರೆಸ್ ಹೈವೇ ನಿರ್ಮಿಸಿ ಉತ್ತರ ಪ್ರದೇಶದ ಜನತೆಗೆ ಅತ್ಯುತ್ತಮ ವ್ಯವಸ್ಥೆಗೊಳಿಸಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಬಿಂಬಿಸಿದ್ದರು.
ಸಂಸದ ತೇಜಸ್ವಿ ಸೂರ್ಯ ಅವರ ಸುಳ್ಳು ಮಾಹಿತಿ ಮತ್ತು ಕಪೋಲಕಲ್ಪಿತ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವ ನಡೆಗೆ ನೆಟ್ಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಸಧ್ಯ ಈ ಹೆದ್ದಾರಿಯ ವಾಸ್ತವಿಕತೆಯ ಕುರಿತು ಅವಲೋಕಿಸಿದಾಗ ಲಕ್ನೋ – ಆಗ್ರಾ ಎಕ್ಸ್ ಪ್ರೆಸ್ ಹೈವೇ ಅನ್ನು ನವೆಂಬರ್ 21, 2016 ರಂದು ಅಂದಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಉದ್ಘಾಟಿಸಿದ್ದರು. ಡಿಸೆಂಬರ್ 23, 2016 ರಲ್ಲಿ ಶಿಕೋಹಾಬಾದ್ ನಿಂದ ಲಕ್ನೋಗೆ ಲಘು ವಾಹನದ ಪ್ರಯಾಣದ ಭಾಗಶಃ ತೆರೆಯಲಾಯಿತು. ಫೆಬ್ರವರಿ 23, 2017 ರಂದು ಆಗ್ರಾ – ಲಕ್ನೋ ಎಕ್ಸ್ ಪ್ರೆಸ್ ಹೈವೇ ಅನ್ನು ಸಾರ್ವಜನಿಕರಿಗೆ ಪೂರ್ಣ ಪ್ರಮಾಣದಲ್ಲಿ ತೆರೆಯಲಾಯಿತು.
ಇದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳನ್ನೇ ಪ್ರಚಾರಪಡಿಸುವ ಬಿಜೆಪಿಯ ನೈಜ ಮುಖ ಸಂಸದ ತೇಜಸ್ವಿ ಸೂರ್ಯ ಅಪ್ಲೋಡ್ ಮಾಡಿದ ವೀಡಿಯೋದಿಂದ ಮತ್ತೊಮ್ಮೆ ಅನಾವರಣಗೊಂಡಿದೆ. ಸಂಸದ ತೇಜಸ್ವಿ ಸೂರ್ಯ ಅವರ ನಡೆಗೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.