►► “ಧ್ವಂಸಗೊಂಡ ಪ್ರತಿಯೊಂದು ಮನಸ್ಸುಗಳ ಜೊತೆಗೆ ನಾವಿದ್ದೇವೆ”
ಉತ್ತರ ಪ್ರದೇಶ: ಕಾಡಿನ ನ್ಯಾಯವಾದ ಬುಲ್ಡೋಝರ್ ಕಾನೂನಿನ ಮೂಲಕ ಸಂವಿಧಾನವನ್ನು ಅಣಕಿಸುತ್ತಿರುವ ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರದ ಅಟ್ಟಹಾಸಕ್ಕೆ ಸಿಲುಕಿ ಮನೆ ಕಳೆದುಕೊಂಡಿರುವ ಜಾಮಿಯಾದ ಮಾಜಿ ವಿದ್ಯಾರ್ಥಿನಿ ಅಫ್ರೀನ್ ಫಾತಿಮಾರ ತಾಯಿ ಪರ್ವೀನ್ ಫಾತಿಮಾ ಜನರಿಗೆ ಹೃದಯಸ್ಪರ್ಶಿ ಪತ್ರವೊಂದನ್ನು ಬರೆದಿದ್ದಾರೆ. ಅಫ್ರೀನ್ ಫಾತಿಮಾ ಈ ಪತ್ರವನ್ನು ತನ್ನ ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದ್ದಾರೆ.
ತಮ್ಮ ಕಷ್ಟದ ದಿನಗಳಲ್ಲಿ ನಮ್ಮ ಕುಟುಂಬಕ್ಕೆ ಮಾನಸಿಕ ಸ್ಥೈರ್ಯ ತುಂಬಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಆದಿತ್ಯನಾಥ್ ಸರಕಾರದ ವಿಧ್ವಂಸಕಾರಿ ಬುಲ್ಡೋಝರ್ ಕ್ರಮಕ್ಕೆ ತುತ್ತಾಗಿ ನಾಶಗೊಂಡ ತಮ್ಮ ಮನೆ ಪುನರ್ನಿರ್ಮಾನಕ್ಕೆ ಹಣ ಸಂಗ್ರಹ ಮಾಡುವಂತೆ ನಾವು ಯಾರಲ್ಲೂ ವಿನಂತಿಸಿಲ್ಲ ಎನ್ನುವುದನ್ನೂ ತಮ್ಮ ಪತ್ರದಲ್ಲಿ ಅಫ್ರೀನ್ ಫಾತಿಮಾ ಸ್ಪಷ್ಟಪಡಿಸಿದ್ದಾರೆ.
ಅಫ್ರೀನ್ ಫಾತಿಮಾ ಪೋಸ್ಟ್ ಮಾಡಿರುವ ತನ್ನ ತಾಯಿಯ ಪತ್ರದಲ್ಲಿ, ” ನಮ್ಮನ್ನು ಬೆಂಬಲಿಸಿದ, ನಮ್ಮೊಂದಿಗೆ ಐಕಮತ್ಯ ಪ್ರದರ್ಶಿಸಿದ ಮತ್ತು ನಮಗಾಗಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನನ್ನ ಗಂಡನ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಹೊರಿಸಿರುವ ಎಲ್ಲಾ ಆರೋಪಗಳ ವಿರುದ್ಧ ಹೋರಾಡಲಿದ್ದೇವೆ. ಅಲಹಾಬಾದಿನ ಮತ್ತು ಇತರ ಪ್ರದೇಶಗಳಲ್ಲಿ ಹಲವು ಮುಸ್ಲಿಮ್ ಕುಟುಂಬಗಳನ್ನು ಅನ್ಯಾಯವಾಗಿ ಗುರಿಯಾಗಿಸಿ ದಾಳಿ ಮಾಡಲಾಗಿದೆ. ಈ ಎಲ್ಲಾ ಸಂತ್ರಸ್ತ ಕುಟುಂಬಗಳ ನೋವಿನೊಂದಿಗೆ ನಾವಿದ್ದೇವೆ” ಎಂದು ಬರೆಯಲಾಗಿದೆ.
ಮುಂದುವರೆದು, “ನನ್ನ ಗಂಡ ಜಾವೇದ್ ಮುಹಮ್ಮದ್ ನಿರಪರಾಧಿ ಮತ್ತು ಅವರು ತನ್ನ ಮೇಲೆ ಹೊರಿಸಿರುವ ಎಲ್ಲಾ ಆಧಾರರಹಿತ ಆರೋಪಗಳನ್ನು ಮೆಟ್ಟಿ ನಿಂತು ಗೆದ್ದು ಬರಲಿದ್ದಾರೆ. ಸದ್ಯಕ್ಕೆ ನಮ್ಮ ಮುಂದಿರುವ ಪ್ರಥಮ ಆದ್ಯತೆ ಜಾವೇದ್ ಮುಹಮ್ಮದ್ ಅವರ ನಿರಪರಾಧಿತ್ವವನ್ನು ಸಾಬೀತುಪಡಿಸಿ ಅವರನ್ನು ಬಿಡುಗಡೆಗೊಳಿಸುವುದಾಗಿದೆ. ನಮಗೆ ಸಿಕ್ಕ ಮಾಹಿತಿಯಂತೆ ಕೆಲವರು ಧ್ವಂಸಗೊಂಡ ನಮ್ಮ ಮನೆಯ ಪುನರ್ನಿರ್ಮಾಣಕ್ಕೆ ಇದೀಗಾಗಲೇ ಹಣ ಸಂಗ್ರಹ ಮಾಡುತ್ತಿದ್ದು, ಇನ್ನು ಕೆಲವರು ಇದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಎಂದು ನಮ್ಮ ಅರಿವಿಗೆ ಬಂದಿದೆ. ಈ ರೀತಿ ಆನ್ಲೈನ್ ಅಥವಾ ಆಫ್’ಲೈನ್ ಹಣ ಸಂಗ್ರಹಕ್ಕೆ ನಾವು ಯಾರನ್ನೂ ಅನುಮತಿಸಿಲ್ಲ. ಇದು ನಮ್ಮ ಕುಟುಂಬದ ಇಚ್ಛೆಗೆ ವಿರುದ್ಧವಾಗಿದೆ” ಎಂದು ಪರ್ವೀನ್ ಫಾತಿಮಾ ಪತ್ರದಲ್ಲಿ ವಿನಂತಿಸಿದ್ದಾರೆ