ಪ್ರಧಾನಿಯನ್ನು ಭೇಟಿಯಾದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್!

Prasthutha|

ಹೊಸದಿಲ್ಲಿ : ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಪ್ರಮುಖ ವಿಚಾರಗಳ ಚರ್ಚೆ ಮಾಡಿದ್ದಾರೆ.

- Advertisement -

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸ್ಟಾಲಿನ್, ಚುನಾವಣೆಯಲ್ಲಿ ಗೆದ್ದು ಮುಖ್ಯ ಮಂತ್ರಿಯಾಗಿದ್ದಕ್ಕೆ ಪ್ರಧಾನಿಯವರು ಅಭಿನಂಧಿಸಿದ್ದಾರೆ. ತಮಿಳು ನಾಡಿನ ಸರ್ವಾಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರ ಕೈ ಜೋಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಯಾವೆಲ್ಲಾ ವಿಚಾರಗಳನ್ನು ಚರ್ಚಿಸಿದ್ದೀರಿ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವುದು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂತೆಗೆದುಕೊಳ್ಳುವುದು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸುವುದು, ಮತ್ತು ಕರಡು ಇಐಎ ಅಧಿಸೂಚನೆ, ಸೇತುಸಮುದ್ರಂ ಹಡಗು ಕಾಲುವೆ ಯೋಜನೆಯ ಅನುಷ್ಠಾನದ ಜೊತೆಗೆ ಕೆಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

- Advertisement -

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಪ್ರಧಾನ ಮಂತ್ರಿಯನ್ನು ಭೇಟಿಯಾಗಲು ಬಯಸಿದ್ದೆ, ಆದರೆ ಕೋವಿಡ್ ಸೋಂಕಿನ ಕಾರಣದಿಂದಾಗಿ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇಂದು ಅವರನ್ನು ಭೇಟಿಯಾಗಿ ರಾಜ್ಯದ ಅಭಿವೃದ್ಧಿಗೆ ಕೇಂದ್ರದ ಸಹಕಾರವನ್ನು ಕೇಳುವುದರ ಜೊತೆಗೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ತಮಿಳು ನಾಡಿನ ಬೇಡಿಕೆಗಳನ್ನು ಈಡೆರಿಸುತ್ತದೆ ಎನ್ನುವ ಭರವಸೆ ಇದೆ. ನಮ್ಮ ಸರ್ಕಾರ ತಮಿಳು ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದು ಅವರು ಹೇಳಿದ್ದಾರೆ.



Join Whatsapp