ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಪರ-ವಿರೋಧದ ಚರ್ಚೆಗಳು ತೀವ್ರಗೊಂಡಿದ್ದು, ಇದೀಗ ಲೇಖಕರು ಹಾಗೂ ಕವಿಗಳಿಂದಲೂ ಪಠ್ಯದಿಂದ ತಮ್ಮ ಪಾಠಗಳನ್ನು ಕೈಬಿಡುವಂತೆ ಒತ್ತಾಯ ಕೇಳಿಬರುತ್ತಿದೆ.ಇದರಿಂದ ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆಯು ಸಂಕಷ್ಟ ಪರಿಸ್ಥಿತಿಗೆ ಸಿಲುಕಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ತಮ್ಮ ಪಾಠವನ್ನು ಪಠ್ಯದಿಂದ ಕೈಬಿಡಬೇಕೆಂದು ಕೋರಿ ಹಿರಿಯ ಸಾಹಿತಿ ದೇವನೂರು ಮಹಾದೇವ ಮನವಿ ಸಲ್ಲಿಸಿದ್ದರು. ಇದಾದ ನಂತರ ಇದೀಗ ಭಗತ್ ಸಿಂಗ್ ಕುರಿತ ತಮ್ಮ ಲೇಖನ ತಿರಸ್ಕರಿಸುವಂತೆ ಡಾ.ಜಿ.ರಾಮಕೃಷ್ಣ ಕೂಡ ಮನವಿ ಮಾಡಿದ್ದಾರೆ.
‘ನಮ್ಮ ರಾಜ್ಯದ ಶಾಲೆಗಳ ಪಠ್ಯಪುಸ್ತಕಗಳ ಪರಿಷ್ಕರಣೆಯು ತೀರಾ ಅಪಾಯಕಾರಿ ಮಾರ್ಗದಲ್ಲಿ ಸಾಗುತ್ತಿದೆ. ವೈಚಾರಿಕ ಮತ್ತು ವೈಜ್ಞಾನಿಕ ಮಾರ್ಗದಲ್ಲಿ ನಡೆಯುತ್ತಿಲ್ಲ. ಶಿಕ್ಷಣವನ್ನು ಕೆಟ್ಟ ರಾಜಕೀಯಕ್ಕೆ ಗುರಿಮಾಡಲಾಗುತ್ತಿರುವುದು ಸರ್ವಥಾ ಕ್ಷಮಾರ್ಹವಲ್ಲ. ಮಕ್ಕಳಿಗೆ ವಿಷ ಉಣಿಸುವುದು ಬೌದ್ಧಿಕ ಕ್ಷೇತ್ರದಲ್ಲಿ ದುರಂತಗಳಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ನನ್ನ ಯಾವುದೇ ಬರಹವನ್ನು ಪಠ್ಯಪುಸ್ತಕದ ಪರಿಧಿಯಿಂದ ಹೊರಗಿಡುವುದು ಸೂಕ್ತ. ನನ್ನ ಯಾವುದಾದರು ಬರಹವನ್ನು ಆಯ್ಕೆ ಮಾಡಿಕೊಂಡಿದ್ದರೆ ಅದಕ್ಕೆ ನನ್ನ ಸಮ್ಮತಿ ಇರುವುದಿಲ್ಲ’ ಎಂದು ಅವರು ಡಾ. .ಜಿ ರಾಧಾಕೃಷ್ಣ ತಮ್ಮ ನಿಲುವು ಸ್ಪಷ್ಪಪಡಿಸಿದ್ದಾರೆ.
ಪಠ್ಯಪುಸ್ತಕದಲ್ಲಿ ಆರೆಸ್ಸೆಸ್ ಸಂಸ್ಥಾಪಕ ಕೇಶವ ಬಲಿರಾಂ ಹೆಡಗೆವಾರ್ ಅವರ ಬರಹ ಸೇರ್ಪಡೆ ಮಾಡಿರುವುದನ್ನು ಸೇರಿದಂತೆ ಹಲವು ಸೇರ್ಪಡೆ ಮತ್ತು ಕೈಬಿಡುವುದಕ್ಕೆ ಹಲವರು ವಿರೋಧಿಸಿದ್ದಾರೆ. ಇದರಲ್ಲಿ ಶಿಕ್ಷಣ ತಜ್ಞರು, ಸಾಹಿತಿಗಳು, ಚಿಂತಕರು ಹಾಗೂ ಕವಿಗಳೂ ಸೇರಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಬುಧವಾರ ಶಿಕ್ಷಣ ತಜ್ಞರು ಮತ್ತು ಚಿಂತಕರೊಂದಿಗೆ ನಗರದ ಗಾಂಧಿ ಭವನದಲ್ಲಿ ಚಿಂತಕರು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.