ಪಠ್ಯ ಪರಿಷ್ಕರಣೆ ವಿವಾದ: ಕೈಬಿಟ್ಟ 7 ಲೇಖಕರ ಪಠ್ಯ ಸೇರ್ಪಡೆಗೆ ಸರಕಾರ ಮರು ಆದೇಶ

Prasthutha|

ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿಯನ್ನು ವಿರೋಧಿಸಿ, 7 ಲೇಖಕರು ಒಪ್ಪಿಗೆ ಸೂಚಿಸದಿರುವ ಕಾರಣಕ್ಕೆ 6, 9 ಹಾಗೂ 10ನೇ ತರಗತಿಯ ಪಠ್ಯವನ್ನು ಕೈಬಿಟ್ಟಿದ್ದ ಸರ್ಕಾರವು ಈಗ ಅದೇ ಪಠ್ಯಗಳನ್ನು ಪರಿಗಣಿಸುವಂತೆ ಸೂಚಿಸಿ ಮರು ಆದೇಶ ಹೊರಡಿಸಿದೆ.

- Advertisement -

ಸಾಹಿತಿ ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’, ಡಾ.ಜಿ.ರಾಮಕೃಷ್ಣರ ‘ಭಗತ್ ಸಿಂಗ್’, ರೂಪಾ ಹಾಸನ ಅವರ ‘ಅಮ್ಮನಾಗುವುದೆಂದರೆ’, ಈರಪ್ಪ ಎಂ. ಕಂಬಳಿ ಅವರ ‘ಹೀಗೊಂದು ಟಾಪ್ ಪ್ರಯಾಣ’, ಸತೀಶ ಕುಲಕರ್ಣಿ ಅವರ ‘ಕಟ್ಟತೇವ ನಾವು’, ಸುಕನ್ಯಾ ಮಾರುತಿ ಅವರ ‘ಏಣಿ’ ಹಾಗೂ ದೊಡ್ಡಹುಲ್ಲೂರು ರುಕ್ಕೋಜಿರಾವ್ ಅವರ ‘ಡಾ.ರಾಜ್ಕುಮಾರ್’ಮುಂತಾದ ಲೇಖಕರ ಪಠ್ಯಗಳನ್ನು ವಿವಿಧ ತರಗತಿಯಲ್ಲಿ ಅಳವಡಿಸಲಾಗಿತ್ತು.

ರೋಹಿತ್ ಚಕ್ರತೀರ್ಥ ಸಮಿತಿಯು ಪಠ್ಯವನ್ನು ಕೇಸರೀಕರಣ ಮಾಡಿದೆ ಎಂದು ವಿವಾದವಾದ ಬೆನ್ನಲ್ಲೇ , ತಮ್ಮ ಪಠ್ಯಗಳನ್ನು ಕೈಬಿಡುವಂತೆ ಲೇಖಕರು ಸರಕಾರಕ್ಕೆ ಪತ್ರ ಬರೆದಿದ್ದರು. ಹಾಗಾಗಿ ಸೆ.23ರಂದು ಈ ಏಳು ಲೇಖಕರ ಪಠ್ಯ ಕೈಬಿಡುವಂತೆ ಸರ್ಕಾರಿ ಶಾಲೆ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಸರ್ಕಾರವು ಆದೇಶ ಹೊರಡಿಸಿತ್ತು.

- Advertisement -

ಕೈಬಿಟ್ಟಿರುವ ಏಳು ಬರಹಗಾರರ ಪಠ್ಯವನ್ನು ಮುಂದುವರಿಸುವಂತೆ ಸಾರ್ವಜನಿಕರು, ಪೋಷಕರು ಹಾಗೂ ಗಣ್ಯರು ಕೋರಿದ್ದು, ವಿದ್ಯಾರ್ಥಿಗಳು ಆಗಲೇ ಈ ಪಠ್ಯಗಳನ್ನು ವ್ಯಾಸಂಗ ಮಾಡಿದ್ದಾರೆ. ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ಈ ವಿಷಯಗಳ ಬೋಧನೆ ಕೈಬಿಡುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಿಯಾದ ಕ್ರಮವಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಈ ಪಠ್ಯ ಮುಂದುವರಿಸಲು ಕೋರಿದ್ದಾರೆ. ಆದ್ದರಿಂದ ಕೈಬಿಟ್ಟ ಏಳು ಲೇಖಕರ ಪಠ್ಯಗಳನ್ನು  ಪರಿಗಣಿಸುವಂತೆ ಸೂಚಿಸಿ ಮರು ಆದೇಶ ಹೊರಡಿಸಿದೆ.

ಆದರೆ 2022–23ನೇ ಶೈಕ್ಷಣಿಕ ಸಾಲಿಗೆ ಮಾತ್ರ ಈ ಏಳು ಪಾಠಗಳನ್ನು ಬೋಧನೆ, ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸುವಂತೆ ಅ.28ರ ಆದೇಶದಲ್ಲಿ ತಿಳಿಸಲಾಗಿದೆ.

Join Whatsapp