ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ : ಭಯೋತ್ಪಾದಕ ಆದಿತ್ಯ ರಾವ್ ಗೆ 20 ವರ್ಷ ಜೈಲು ಶಿಕ್ಷೆ

Prasthutha|

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯೋತ್ಪಾದಕ  ಆದಿತ್ಯರಾವ್ ಗೆ ದಕ್ಷಿಣ ಕನ್ನಡ ಜಿಲ್ಲಾ ನಾಲ್ಕನೇ ಹೆಚ್ಚುವರಿ ನ್ಯಾಯಾಲಯ ತೀರ್ಪು ನೀಡಿದ್ದು, ಆತನಿಗೆ 20 ವರ್ಷ ಶಿಕ್ಷೆ, 10 ಸಾವಿರ ದಂಡ ವಿಧಿಸಿದೆ.

- Advertisement -

ಸ್ಫೋಟಕ ತಡೆ ಕಾಯ್ದೆಯಡಿ 5 ವರ್ಷ ಹಾಗೂ ಯುಎಪಿಎ ಕಾಯ್ದೆಯಡಿ 20 ವರ್ಷ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಘಟನೆಯ ಹಿನ್ನೆಲೆ

- Advertisement -

ಜ.20ರಂದು ಬೆಳಗ್ಗೆ 9.05ರ ಸುಮಾರಿಗೆ ರಿಕ್ಷಾವೊಂದರಲ್ಲಿ ಚಾಲಕ ಸೇರಿದಂತೆ ಇಬ್ಬರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅದರಲ್ಲಿ ಆದಿತ್ಯ ರಾವ್‌ ಆಟೋ ರಿಕ್ಷಾದಿಂದ ಇಳಿದು ಸ್ಫೋಟಕ ತುಂಬಿದ ಬ್ಯಾಗನ್ನು ನಿರ್ಗಮನ ದ್ವಾರದ ಸಮೀಪದ ಟಿಕೆಟ್‌ ಕೌಂಟರ್‌ ಬಳಿಯಿರುವ ಆಸನದ ಮೇಲಿರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಬಾಂಬ್‌ ಇರಿಸಿದ ಬಳಿಕ ಆರೋಪಿ ಆದಿತ್ಯ ರಾವ್‌ ಬೆಂಗಳೂರಿಗೆ ತೆರಳಿ ಜ. 22 ರಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರ ಕಚೇರಿಯಲ್ಲಿ ಶರಣಾಗಿದ್ದ. ಆತನನ್ನು ಹಲಸೂರು ಗೇಟ್‌ ಪೊಲೀಸ್‌ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು. ಮಂಗಳೂರು ಪೊಲೀಸ್‌ ತಂಡ ಬೆಂಗಳೂರಿಗೆ ತೆರಳಿ ಆತನನ್ನು ಬಂಧಿಸಿ ಮಂಗಳೂರಿಗೆ ಕರೆ ತಂದಿತ್ತು.

ವಿಮಾನ ನಿಲ್ದಾಣದಲ್ಲಿ ಆತ ಇರಿಸಿ ಹೋಗಿದ್ದ ಬ್ಯಾಗಿನಲ್ಲಿ ಕಂಡು ಬಂದ ಶಂಕಾಸ್ಪದ ವಸ್ತುಗಳು ಸ್ಪೋಟಕಗಳೇ ಆಗಿವೆ ಎನ್ನುವುದು ಎಫ್‌ ಎಸ್‌ಎಲ್‌ ಟೆಸ್ಟ್‌ನಿಂದ ಸಾಬೀತಾಗಿತ್ತು.  ಆದಿತ್ಯ ರಾವ್‌ ವಿರುದ್ಧ 700 ಪುಟಗಳ ದೋಷಾರೋಪಣಾ ಪಟ್ಟಿಯನ್ನು (ಚಾರ್ಜ್‌ಶೀಟ್‌‌) ತನಿಖಾಧಿಕಾರಿಗಳು ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದಿತ್ಯ ರಾವ್‌ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅನ್ವಯ ಪ್ರಕರಣ ದಾಖಲಿಸಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಆರೋಪಿ ದುಷ್ಕೃತ್ಯ ಎಸಗಿ ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕಗಳನ್ನು ಇರಿಸಿದ್ದನು ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು.

ಇದೀಗ ನ್ಯಾಯಾಲಯ ಆತನನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿ 20 ವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.

Join Whatsapp