ಮಂಗಳೂರು: ನಾಥೂರಾಂ ಗೋಡ್ಸೆಯಿಂದಾಗಿ ನಮ್ಮ ದೇಶಕ್ಕೆ ಭಯೋತ್ಪಾದನೆ ಪ್ರವೇಶಿಸಿದೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ನಡೆದ ವಿಚಾರ ಸಂಕೀರ್ಣದಲ್ಲಿ ಮಾತನಾಡಿದ ಅವರು, ಪ್ರಪಂಚದಾದ್ಯಂತ 144 ದೇಶಗಳು ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯನ್ನು ಆಚರಿಸುತ್ತವೆ ಏಕೆಂದರೆ ಅವರು ಒಂದೇ ಒಂದು ಗುಂಡು ಹಾರಿಸದೆ ಸ್ವಾತಂತ್ರ್ಯವನ್ನು ತಂದರು. ಭಾರತದಲ್ಲಿರುವ ಸಾವಿರಾರು ಭಾಷೆ, ಜಾತಿಗಳನ್ನು ಒಂದಾಗಿ ಕೊಂಡೊಯ್ಯಬೇಕಾದರೆ ಯಾವುದಾದರೂ ಒಂದು ದೊಡ್ಡ ತತ್ವ ಅಥವಾ ಸಿದ್ಧಾಂತ ಬೇಕು. ಅದನ್ನೇ ಮಹಾತ್ಮಾ ಗಾಂಧಿಯವರು ಸರ್ವಧರ್ಮ ಸಮಭಾವ ಎಂದು ಕರೆದರು. ಆ ಸಿದ್ಧಾಂತಕ್ಕೋಸ್ಕರ ಪ್ರಾಣವನ್ನು ಬಿಟ್ಟರು.
ನಾನು ಗಾಂಧಿಯವರನ್ನು ಕೊಂದ ನಾಥೂರಾಂ ಗೋಡ್ಸೆಯನ್ನು ಉಗ್ರಗಾಮಿ ಎಂದು ಹೇಳಲ್ಲ. ಆತ ಈ ದೇಶದ ಮೊಟ್ಟ ಮೊದಲ ಭಯೋತ್ಪಾದಕ. ಈ ದೇಶದಲ್ಲಿ ಭಯೋತ್ಪಾದನೆ ಆರಂಭವಾಗಿದ್ದೇ ಗೋಡ್ಸೆಯಿಂದ. ಹಿಂದೂ ಧರ್ಮದ ಮೇಲೆ ನಂಬಿಕೆಯಿಟ್ಟಿದ್ದ ಗಾಂಧಿಯನ್ನು ಕೊಂದ ಹಿಂದೂವನ್ನು ಏನೆಂದು ಕರೆಯಬೇಕು ಎಂದು ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.