ರಾಜ್ಯ ವಿಧಾನಸಭಾ ಅವಧಿ ಮೇ 24ಕ್ಕೆ ಅಂತ್ಯ: ಮುಖ್ಯ ಚುನಾವಣಾ ಆಯುಕ್ತ

Prasthutha|

►ಮನೆಯಿಂದಲೇ ಹಿರಿಯ ನಾಗರೀಕರಿಗೆ ಹಾಗೂ ವಿಶೇಷ ಚೇತನರಿಗೆ ಮತದಾನ ಮಾಡುವ ಅವಕಾಶ

- Advertisement -

►ಇಲಾಖೆಗಳ ಸಮನ್ವಯದಿಂದ ಚುನಾವಣಾ ಅಕ್ರಮ ತಡೆಗೆ ಕ್ರಮ

►ನಗರ ಮತ್ತು ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ

- Advertisement -

ಬೆಂಗಳೂರು: ಪ್ರಸಕ್ತ ಸರಕಾರದ ಅವಧಿ 24 ನೇ ಮೇ 2023 ರಂದು ಮುಗಿಯಲಿದ್ದು, ಇದಕ್ಕೂ ಮುನ್ನ ಪಾರದರ್ಶಕ ಹಾಗೂ ನಿರ್ಭೀತ ಚುನಾವಣೆ ನಡೆಸಲು ಸಜ್ಜಾಗುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯ ಸೂಚನೆ ಮತ್ತು ಸಲಹೆಗಳನ್ನು ನೀಡಲಾಗಿದೆ ಎಂದು ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್‌ ಕುಮಾರ್‌ ಹೇಳಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ 2023 ರ ಸಿದ್ದತೆಗಳ ಬಗ್ಗೆ ಮಾಹಿತಿಯನ್ನು ಪಡೆಯುವ ಉದ್ದೇಶದಿಂದ ರಾಜ್ಯ ಪ್ರವಾಸ ಕೈಗೊಂಡಿದ್ದ ಭಾರತ ಚುನಾವಣಾ ಆಯೋಗದ ನಿಯೋಗದ ವತಿಯಿಂದ ಕೈಗೊಳ್ಳಲಾದ ಹಲವಾರು ಕಾರ್ಯಕ್ರಮಗಳ ಹಾಗೂ ಸಭೆಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್‌ ಕುಮಾರ್‌ ವಿವರಿಸಿದರು.

ಪ್ರಸಕ್ತ ಸರಕಾರದ ಕಾರ್ಯಾವಧಿ ಮೇ 24, 2023 ರಂದು ಮುಗಿಯಲಿದೆ. ಇದಕ್ಕೂ ಮುನ್ನ ಚುನಾವಣೆಯನ್ನು ನಡೆಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾದಂತಹ ಕ್ರಮಗಳ ಬಗ್ಗೆ ವಿಸ್ತ್ರುತವಾದ ಚರ್ಚೆಯನ್ನು ನಡೆಸಿದ್ದೇವೆ. ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ್ದು, ಚುನಾವಣಾ ಪ್ರಕ್ರಿಯೆಯ ಸಿದ್ದತೆಗಳು ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೇವೆ. ಹಾಗೆಯೇ ಅಗತ್ಯ ಸೂಚನೆಗಳನ್ನು ನೀಡಿದ್ದೇವೆ ಎಂದರು.

ರಾಜ್ಯ ಮಾಹಿತಿ:

ರಾಜ್ಯದಲ್ಲಿ 31 ಕಂದಾಯ ಜಿಲ್ಲೆಗಳಿದ್ದು, 34 ಚುನಾವಣಾ ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ರಾಜ್ಯದ ಜನಸಂಖ್ಯೆ 2011 ರ ಜನಗಣತಿಯ ಪ್ರಕಾರ 6.1 ಕೋಟಿಗಳಿದ್ದು, ಸುಮಾರು 50 ರಷ್ಟು ಮಹಿಳೆಯರು ಹಾಗೂ ಪುರುಷರಿದ್ದಾರೆ. ಪುರುಷರು 3.09 ಕೋಟಿ (50.6%) ಮಹಿಳೆಯರು 3.01 ಕೋಟಿ (49.34%).

224 ವಿಧಾನಸಭಾ ಕ್ಷೇತ್ರಗಳಿದ್ದು, ಪರಿಶಿಷ್ಟ ಜಾತಿಗೆ ಮೀಸಲಾಗಿರುವ 36 ಮತ್ತು ಪರಿಶಿಷ್ಟ ಪಂಗಡಕ್ಕೆ 15 ಕ್ಷೇತ್ರಗಳನ್ನು ಮೀಸಲಿಡಲಾಗಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ 5,21,76,579 ಕೋಟಿ ಮತದಾರರು ಇದ್ದಾರೆ. ಇದರಲ್ಲಿ 2,62,42,561 ಮಹಿಳಾ ಮತದಾರರು ಹಾಗೂ 2,59,26,319 ಪುರುಷ ಮತದಾರರು ಇದ್ದಾರೆ. 5,55,073 ವಿಶೇಷ ಚೇತನ ಮತದಾರರು, 80 ವರ್ಷಕ್ಕೂ ಹೆಚ್ಚಿನ ವಯಸ್ಸಿನ 12,15,763 ಮತ್ತು 100 ನೇ ವಯಸ್ಸು ದಾಟಿರುವ 16,976 ಜನ ಮತದಾರರಿದ್ದಾರೆ. ಮೊದಲ ಬಾರಿಗೆ (18-19 ವಯಸ್ಸಿನ) 9,17,241 ಮತದಾರರು ನೊಂದಣಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

80 ವರ್ಷಕ್ಕೂ ಹೆಚ್ಚಿನ ವಯಸ್ಸಿನ ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ:

ಎಲ್ಲರೂ ಮತದಾನ ಮಾಡಲು ಅವಕಾಶ ದೊರೆಯಬೇಕು ಎನ್ನುವ ಉದ್ದೇಶದಿಂದ ಮೊದಲ ಬಾರಿಗೆ 80 ವರ್ಷಕ್ಕೂ ಹೆಚ್ಚಿನ ವಯಸ್ಸಿನ ಹಾಗೂ ವಿಶೇಷ ಚೇತನರಿಗೆ ಮೊದಲ ಬಾರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಮತದಾನ ಕೇಂದ್ರಗಳಲ್ಲಿ ಇವರಿಗೆ ವಿಶೇಷ ಸೌಲಭ್ಯಗಳನ್ನು ಮಾಡಲಾಗಿದೆ. ಆದರೂ, ಮತದಾನ ಕೇಂದ್ರಕ್ಕೆ ಆಗಮಿಸಲು ಸಾಧ್ಯವಾಗದೇ ಇರುವಂತಹ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದೆ. ಎಲ್ಲಾ ರೀತಿಯ ಮುನ್ನೆಚ್ಚರಿಕೆಯನ್ನು ತಗೆದುಕೊಂಡು ಪಾರದರ್ಶಕವಾದ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

ವಿಶೇಷ ಚೇತನರಿಗೆ ಮತದಾನಕ್ಕೆ ವಿಶೇಷ ಸೌಲಭ್ಯ:

ವಿಶೇಷ ಚೇತನ ಮತದಾರರಿಗೆ ಮತಗಟ್ಟೆಗಳಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಮನೆಯಿಂದ ಮತಗಟ್ಟೆಗೆ ಪಿಕ್‌ ಅಂಡ್‌ ಡ್ರಾಪ್‌, ಸಕ್ಷಮ್‌ ಆಪ್‌ ಮೂಲಕ ತಮಗೆ ಬೇಕಾದ ಸೌಲಭ್ಯಗಳ ಬಗ್ಗೆ ಮೊದಲೇ ನೊಂದಾಯಿಸಿಕೊಳ್ಳುವ ಅವಕಾಶ. ವ್ಹೀಲ್‌ ಚೇರ್‌, ಪ್ರಿಯಾರಿಟಿ ವೋಟಿಂಗ್‌, ದೃಷ್ಟಿ ದೋಷದ ಮತದಾರರಿಗೆ ಬೈಲ್‌ ಬ್ಯಾಲಟ್‌ ಪೇಪರ್‌ ನಂತಹ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗುವುದು.

ಮೊದಲ ಬಾರಿ ಮತದಾರರಿಗೆ ಒತ್ತು:

ಚುನಾವಣಾ ಆಯೋಗದ ಪ್ರಯತ್ನದಿಂದ ಈ ಬಾರಿ 9.17 ಲಕ್ಷ ಮೊದಲ ಬಾರಿಯ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಅಲ್ಲದೇ, ಅಡ್ವಾನ್ಸ್‌ ಅಪ್ಲಿಕೇಷನ್‌ ಸೌಲಭ್ಯದ ಮೂಲಕ ಈಗಾಗಲೇ 1.25 ಲಕ್ಷ ಯುವಕರು ಅರ್ಜಿಗಳನ್ನು ಸಲ್ಲಿಸಿದ್ದು, ಅದರಲ್ಲಿ 41,000 ಮತದಾರರು ಏಪ್ರಿಲ್‌ 1, 2023 ರಿಂದ ಮತದಾನಕ್ಕೆ ಅರ್ಹತೆ ಪಡೆದುಕೊಳ್ಳಲಿದ್ದಾರೆ. ಮತದಾನದ ಮಹತ್ವದ ಬಗ್ಗೆ ಇವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುತ್ತಿದೆ.

ಎಲ್ಲಾ ವರ್ಗದ ಜನರಿಗೂ ದುರ್ಬಲ ಬುಡಕಟ್ಟು ಜನಾಂಗದವರು ಚುನಾವಣೆಯಲ್ಲಿ ಪಾಲ್ಗೊಳ್ಳಲು ವಿಶೇಷ ಒತ್ತು:

ರಾಜ್ಯದ ದುರ್ಬಲ ಬುಡಕಟ್ಟು ಜನಾಂಗಗಳಾದ ಜೇನು ಕುರುಬ ಮತ್ತು ಕೊರಗ ಬುಡಕಟ್ಟು ಜನಾಂಗದವರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ವಿಶೇಷ ಒತ್ತು ನೀಡಲಾಗಿದೆ. ಇವರಲ್ಲಿ ಅರ್ಹರಿರುವರಿಗೆ ಶೇಕಡಾ 100 ರಷ್ಟು ಜನರನ್ನ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಅಲ್ಲದೇ, ರಾಜ್ಯದಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ 40 ಎಥ್ನಿಕ್‌ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು.

ತೃತೀಯ ಲಿಂಗಿಗಳಿಗೂ ಅವಕಾಶ:

ರಾಜ್ಯದಲ್ಲಿ ಸುಮಾರು 42,756 ಜನ ತೃತೀಯ ಲಿಂಗಿಗಳಿದ್ದು, ಇವರಲ್ಲಿ 41,312 ಜನರನ್ನ ಮತದಾರರ ಪಟ್ಟಿಯಲ್ಲಿ ನೊಂದಾಯಿಸಲಾಗಿದೆ. ಇವರು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎನ್ನುವುದು ಆಯೋಗದ ಆಶಯವಾಗಿದೆ.

58,282 ಮತಗಟ್ಟೆಗಳ ಸ್ಥಾಪನೆ:

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಪ್ರತಿ ಮತಗಟ್ಟೆಗೆ ಸರಾಸರಿ 883 ಮತದಾರರಂತೆ 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ನಗರ ಪ್ರದೇಶಗಳಲ್ಲಿ 24,063 ಮತ್ತು ಗ್ರಾಮೀಣ ಪ್ರದೇಶದಲ್ಲಿ 34,219 ಮತಗಟ್ಟೆಗಳು ಇರಲಿವೆ. ವಿಶೇಷವಾಗಿ 1320 ಮಹಿಳಾ ಮತಗಟ್ಟೆಗಳು, 224 ಯುವ ಅಧಿಕಾರಿಗಳು ನಿರ್ವಣೆಯ, 224 ವಿಶೇಷ ಚೇತನರು ಮತ್ತು 240 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ರಾಜ್ಯದ ಸುಮಾರು 1200 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾಗಿದ್ದು ಇವುಗಳ ನಿರ್ವಹಣೆಗೆ ಅಗತ್ಯ ಹೆಚ್ಚಿನ ಭದ್ರತೆಯ ಸೌಲಭ್ಯಗಳನ್ನು ಒದಗಿಸಲಾಗುವುದು. ರಾಜ್ಯದ ಶೇಕಡಾ 50 ರಷ್ಟು ಮತಗಟ್ಟೆಗಳು ವೆಬ್‌ಕಾಸ್ಟಿಂಗ್‌ ಸೌಲಭ್ಯವನ್ನು ಹೊಂದಿವೆ.

ಶಾಶ್ವತ ಮೂಲಭೂತ ಸೌಕರ್ಯಗಳ ಅಳವಡಿಕೆ:

ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್‌, ಶೌಚಾಲಯ ಮತ್ತು ಅಂಗವಿಕಲರಿಗೆ ರ್ಯಾಂಪ್‌ ನಂತಹ ಸೌಲಭ್ಯಗಳನ್ನ ಪ್ರತಿ ಚುನಾವಣೆಯ ಸಂಧರ್ಭದಲ್ಲಿ ಅಳವಡಿಸಲಾಗುತ್ತದೆ. ಪ್ರತಿ ಬಾರಿ ತಾತ್ಕಾಲಿಕವಾಗಿ ಈ ಸೌಕರ್ಯಗಳನ್ನು ಅಳವಡಿಸುವ ಚಿಂತನೆಯನ್ನು ಬಿಟ್ಟು, ಶಾಶ್ವತವಾಗಿ ಸೌಕರ್ಯಗಳನ್ನು ಅಳವಡಿಸಲಾಗುವುದು. ಚುನಾವಣಾ ಆಯೋಗದ ವತಿಯಿಂದ ಆಯಾ ಶಾಲೆಗಳಿಗೆ ಇದು ಉಡುಗೊರೆಯಾಗಿರಲಿದೆ.

ನಗರ ಮತದಾರರ ನಿರಾಸಕ್ತಿ:

ನಗರ ಮತದಾರರ ನಿರಾಸಕ್ತಿ ಬಹಳ ದೊಡ್ಡ ಸವಾಲಾಗಿದೆ. ಇದನ್ನ 2013 ರಲ್ಲಿ ನಡೆದ ಮತದಾನಕ್ಕಿಂತಲೂ ಕಡಿಮೆ ಮತದಾನ 2018 ರ ಚುನಾವಣೆಯಲ್ಲಿ ಕಾಣಬಹುದಾಗಿದೆ. ಬೃಹತ್‌ ಬೆಂಗಳೂರು ವ್ಯಾಪ್ತಿಯಲ್ಲಿ ಕಡಿಮೆ ಮತದಾನ ಕಂಡುಬಂದಿದ್ದು, ಇದನ್ನ ಹೋಗಲಾಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನ ಚುನಾವಣಾ ಆಯೋಗದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಮತದಾರರ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸುವಲ್ಲಿ ಉತ್ತೇಜಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ವಿಶ್ವ ಮತ್ತು ದೇಶದ ಐಟಿ ಹಬ್‌ ಆಗಿರುವ ಬೆಂಗಳೂರು ಬೇರೆ ರಾಜ್ಯಗಳಿಗೂ ಮಾದರಿಯಾಗಲಿ ಎನ್ನುವುದು ನಮ್ಮ ಆಶಯವಾಗಿದೆ ಎಂದರು.

ಚುನಾವಣಾ ಆಯೋಗದ ವತಿಯಿಂದ ಸುವಿಧಾ ವೆಬ್ ಸೈಟ್‌ ಮತ್ತು ಸಕ್ಷಮ್‌ ಆಪ್‌ ರಚಿಸಲಾಗಿದ್ದು ಮತದಾರರು ಹಾಗೂ ರಾಜಕೀಯ ಪಕ್ಷಗಳು ತಮ್ಮ ಹಲವಾರು ಅಗತ್ಯತೆಗಳಿಗೆ ಇವುಗಳನ್ನು ಬಳಸಿಕೊಳ್ಳಬಹುದಾಗಿದೆ.

ಚುನವಾಣೆಯ ಸಂಧರ್ಭದಲ್ಲಿ ಹಣ ಪ್ರಭಾವವನ್ನು ಬಳಸಿ ನಡೆಸಲಾಗುವ ಚುನಾವಣಾ ಆಕ್ರಮವನ್ನು ತಪ್ಪಿಸುವ ನಿಟ್ಟಿನಲ್ಲಿ ಹಲವಾರು ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಲಿವೆ. ಈ ಬಗ್ಗೆ ಅಧಿಕಾರಿಗಳೀಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಿ ವಿಜಿಲ್‌ ಅಪ್‌ ಮೂಲಕ ಜನ ಸಾಮಾನ್ಯರು ಚುನಾವಣಾ ಅಕ್ರಮವನ್ನು ಅನಾಮಧೇಯವಾಗಿ ದೂರು ನೀಡಬಹುದಾಗಿದೆ.

ಎಲೆಕ್ಯಾಥಾನ್‌ 2023 ಹ್ಯಾಕಥಾನ್‌ ನ್ನು ನಿನ್ನೆ ಪ್ರಾರಂಭಿಸಿದ್ದು, ಹೊಸ ಮತದಾರರನ್ನ ಪಟ್ಟಿಗೆ ಸೇರಿಸುವುದು ಹಾಗೂ ಮತದಾನದ ಬಗ್ಗೆ ನಗರ ಪ್ರದೇಶ ಹಾಗೂ ಯುವ ಜನರಲ್ಲಿ ಆಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ನೂತನ ಕ್ರಮಗಳನ್ನು ಗುರುತಿಸುವ ಪ್ರಮುಖ ಉದ್ದೇಶದಿಂದ ಈ ಹ್ಯಾಕಥಾನ್‌ ಎಲೆಕ್ಯಾಥಾನ್‌ – 2023 ಆಯೋಜಿಸಲಾಗಿದೆ. ಮೂರು ಹಂತಗಳಲ್ಲಿ 30 ದಿನಗಳ ಕಾಲ ನಡೆಯಲಿರುವ ಈ ಹ್ಯಾಕಥಾನ್‌ ನಲ್ಲಿ ಜನರು ಭಾಗವಹಿಸಿ ಸಲಹೆ ಮತ್ತು ಸೂಚನೆಗಳನ್ನು ನೀಡಬೇಕು ಎಂದು ಕರೆ ನೀಡಿದರು.



Join Whatsapp