ಮಂಗಳೂರು- ಬೆಂಗಳೂರು ನಡುವೆ ತಾತ್ಕಾಲಿಕ ಹೆಚ್ಚುವರಿ ರೈಲು – ವಾರದಲ್ಲಿ ಮೂರುದಿನ ವಿಶೇಷ ಸೇವೆ

Prasthutha|

ಮಂಗಳೂರು: ಭೂಕುಸಿತದಿಂದಾಗಿ ಶಿರಾಡಿ ಘಾಟ್ ರಸ್ತೆಯಲ್ಲಿ ಸಂಚಾರ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಬೆಂಗಳೂರು ತೆರಳುವ ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಮಂಗಳೂರು ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆಯನ್ನು ಒದಗಿಸಲಾಗಿದೆ.

- Advertisement -

ಜುಲೈ 26ರಿಂದ ಆಗಸ್ಟ್ 31ರ ತನಕ ಮಂಗಳೂರು ಸೆಂಟ್ರಲ್‌ನಿಂದ‌ ಬೆಂಗಳೂರು ನಡುವೆ ಈ ವಿಶೇಷ ರೈಲು ಓಡಲಿದ್ದು, ವಾರದಲ್ಲಿ 3 ದಿನ ಸೇವೆ ನೀಡಲಿದೆ.

ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಡಲಿರುವ ಈ ರೈಲು ಬೆಳಗ್ಗೆ 9.05ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ.
ಮಂಗಳೂರಿನಿಂದ ಸಂಜೆ 6.30ಕ್ಕೆ ಹೊರಡಲಿರುವ ಈ ವಿಶೇಷ ರೈಲು ಬೆಂಗಳೂರು ನಿಲ್ದಾಣಕ್ಕೆ ಬೆಳಗ್ಗೆ 6.15ಕ್ಕೆ ತಲುಪಲಿದೆ.

- Advertisement -

ಪ್ರತೀ ಸೋಮವಾರ, ಬುಧವಾರ ಮತ್ತು ಶುಕ್ರವಾರ ಈ ವಿಶೇಷ ರೈಲು ಮಂಗಳೂರಿನಿಂದ ಬೆಂಗಳೂರಿಗೆ ಸೇವೆ ನೀಡಲಿದ್ದು, ಆದಿತ್ಯವಾರ, ಮಂಗಳವಾರ ಮತ್ತು ಗುರುವಾರ ಬೆಂಗಳೂರಿನಿಂದ ಮಂಗಳೂರಿಗೆ ಸೇವೆ ನಡೆಸಲಿದೆ.

ಈ ವಿಶೇಷ ರೈಲು ಒಂದು 2-tier (ಶ್ರೇಣಿ) ಎಸಿ, ಎರಡು 3-tier (ಶ್ರೇಣಿ) ಎಸಿ, ಒಂಬತ್ತು ದ್ವಿತೀಯ ದರ್ಜೆಯ ಸ್ಲೀಪರ್, ನಾಲ್ಕು ದ್ವಿತೀಯ ದರ್ಜೆಯ ಸಿಟ್ಟಿಂಗ್, ಎರಡು ಲಗೇಜ್ ಕೋಚ್‌ಗಳನ್ನು ಒಳಗೊಂಡಿದ್ದು, ಈ ರೈಲು ಮಂಡ್ಯ ಮೈಸೂರು ಮೂಲಕ ಸಂಚರಿಸಲಿದೆ.

ನಿರಂತರ ಮಳೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ಶಿರಾಡಿ ರಸ್ತೆಯಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಇದು ಮಂಗಳೂರಿನಿಂದ ಬೆಂಗಳೂರು ತೆರಳುವ ರೈಲಿನಲ್ಲಿ ಜನದಟ್ಟಣೆಗೆ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ಬೇಡಿಕೆ ಬಂದ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವಿಭಾಗ ಈ ವಿಶೇಷ ರೈಲು ಸೇವೆಗೆ ಅನುಮೋದನೆ ನೀಡಿದೆ.



Join Whatsapp