ಹನಮಕೊಂಡ: ಗ್ರಾಮದಲ್ಲಿ ಸರ್ಕಾರಿ ಯೋಜನೆಗಳನ್ನು ಜಾರಿಗೆ ತರಲು ಅಭಿವೃದ್ಧಿ ಕಾಮಗಾರಿಗಳಿಗಾಗಿ ಇದ್ದ ಅನುದಾನದ ಬಿಲ್ ಗಳನ್ನು ವಿಲೇವಾರಿ ಮಾಡದ ಪರಿಣಾಮ ಸರ್ಪಂಚ್ (ಗ್ರಾಮಾಧಿಕಾರಿ) ಒಬ್ಬರು ಜೀವನೋಪಾಯಕ್ಕಾಗಿ ಕೂಲಿ ಕಾರ್ಮಿಕಾರಗಿ ದುಡಿಯುತ್ತಿರುವ ಘಟನೆ ತೆಲಂಗಾಣದ ಹನಮಕೊಂಡದಿಂದ ವರದಿಯಾಗಿದೆ.
ವಿಶ್ವನಾಥ್ ಕಾಲೋನಿಯ ಸರ್ಪಂಚ್ ವಲ್ಲೆಪು ಅನಿತಾ ರಮೇಶ್ ಜೀವನೋಪಾಯಕ್ಕಾಗಿ ಕೂಲಿ ಕಾರ್ಮಿಕಾರಗಿ ದುಡಿಯುತ್ತಿದ್ದಾರೆ. ವಲ್ಲೆಪು ಅನಿತಾ ರಮೇಶ್ ಗ್ರಾಮದ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವುದಕ್ಕಾಗಿ 8 ಲಕ್ಷ ರೂಪಾಯಿ ಸಾಲ ಮಾಡಿದ್ದು, ಈ ಹೊಸ ಗ್ರಾಮಪಂಚಾಯಿತಿಯನ್ನು 3 ವರ್ಷಗಳ ಹಿಂದೆ ರಚಿಸಲಾಗಿತ್ತು. ಈಗ ಈ ಗ್ರಾಮಪಂಚಾಯಿತಿ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸುತ್ತಿದೆ.
ಅನಿತಾ ಆಡಳಿತಾರೂಢ ಪಕ್ಷದ ಟಿಆರ್ ಎಸ್ ಪಕ್ಷದ ಸದಸ್ಯರಾಗಿದ್ದು 2020 ರಲ್ಲಿ ಸರ್ಪಂಚ್ ಆಗಿ ಚುನಾಯಿತರಾಗಿದ್ದರು.
ಕಳೆದ ಕೆಲವು ವರ್ಷಗಳಿಂದ, ನಾನು ನನ್ನ ಪ್ರದೇಶದಲ್ಲಿ ಕೆಲವು ಕಾಮಗಾರಿಗಳಿಗೆ ಗುತ್ತಿಗೆದಾರರನ್ನು ತೊಡಗಿಸಿಕೊಳ್ಳಲು ಮಾರುಕಟ್ಟೆಯಿಂದ ಬಂಡವಾಳವನ್ನು ಸಂಗ್ರಹಿಸಿದೆ. ಸರ್ಕಾರವು ಬಿಲ್ ಗಳನ್ನು ತೆರವುಗೊಳಿಸಿದ ನಂತರ ಸಾಲ ನೀಡಿದವರಿಗೆ ಮರುಪಾವತಿಸುತ್ತೇನೆ ಎಂದು ನಾನು ಭಾವಿಸಿದ್ದೆ, ಆದರೆ ಅದು ಇನ್ನೂ ಇತ್ಯರ್ಥಗೊಳಿಸಿಲ್ಲ ಎಂದು ಅನಿತಾ ಹೇಳಿದ್ದಾರೆ.
ನಮ್ಮ ಗ್ರಾಮದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಸಣ್ಣ ಕಾಮಗಾರಿಗಳನ್ನು ಪೂರ್ಣಗೊಳಿಸುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ನನ್ನ ವೈಯಕ್ತಿಕ ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿದೆ. ಆದ್ದರಿಂದ ಕುಟುಂಬದ ನಿರ್ವಹಣೆಗಾಗಿ ಉದ್ಯೋಗ ಖಾತ್ರಿಯಡಿ ದಿನಗೂಲಿ ನೌಕರರಾಗಿ ದುಡಿಯುತ್ತಿದ್ದೇನೆ ಎಂದು ಹೇಳಿದರು.