ಹೈದರಾಬಾದ್: ನವಜಾತ ಶಿಶುಗಳ ಬೃಹತ್ ಕಳ್ಳಸಾಗಣೆ ಹಾಗೂ ಮಾರಾಟ ಜಾಲವನ್ನು ತೆಲಂಗಾಣದ ರಾಚಕೊಂಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮೆಡಿಪಲ್ಲಿ ಪೊಲೀಸರು ಭೇದಿಸಿದ್ದು, ಸುಮಾರು 11 ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ದೆಹಲಿ ಮತ್ತು ಪುಣೆಯಿಂದ ಮೂವರು ಆರೋಪಿಗಳಿಂದ ಮಕ್ಕಳನ್ನು ಖರೀದಿಸಿದ ಎಂಟು ಮಹಿಳೆಯರು ಸೇರಿದಂತೆ ಒಟ್ಟು 11 ಜನರನ್ನು ಬಂಧಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ರಾಚಕೊಂಡ ಪೊಲೀಸ್ ಆಯುಕ್ತ ತರುಣ್ ಜೋಶಿ, ನವಜಾತ ಶಿಶುಗಳ ಬೃಹತ್ ಕಳ್ಳಸಾಗಣೆ ಹಾಗೂ ಮಾರಾಟ ಪ್ರಕರಣದ ಪ್ರಮುಖ ಮೂವರು ಆರೋಪಿಗಳು ಮಕ್ಕಳನ್ನು ಶ್ರೀಮಂತ ದಂಪತಿಗಳಿಗೆ ಮಾರಾಟ ಮಾಡುತ್ತಿದ್ದರು. ಈವರೆಗೆ ಒಟ್ಟು 11 ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯೊಂದಿಗೆ ಪೊಲೀಸ್ ಇಲಾಖೆ ರಕ್ಷಿಸಿದೆ. ರಕ್ಷಿಸಲ್ಪಟ್ಟ ಮಕ್ಕಳ ಪೈಕಿ ಒಂದು ತಿಂಗಳಿಂದ ಎರಡೂವರೆ ತಿಂಗಳ ವಯಸ್ಸಿನ ಮಕ್ಕಳಿದ್ದು, ಒಂಬತ್ತು ಹೆಣ್ಣು ಮಕ್ಕಳು, ಉಳಿದ ಇಬ್ಬರು ಗಂಡು ಮಕ್ಕಳು. ಇದುವರೆಗೆ ಸುಮಾರು 50ಕ್ಕೂ ಹೆಚ್ಚು ಮಕ್ಕಳನ್ನು ಕಳ್ಳ ಸಾಗಣೆ ಮಾಡಿದ್ದಾರೆ. ಒಂದು ಮಗುವಿಗೆ 1.5 ಲಕ್ಷದಿಂದ 6 ಲಕ್ಷ ರೂ.ವರೆಗೆ ಮಾರಾಟ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.