ತೆಲಂಗಾಣ ವಿಧಾನಸಭೆ ಚುನಾವಣೆಗೆ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.
119 ಸ್ಥಾನಗಳ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ 2,290 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು 3.26 ಕೋಟಿಗೂ ಹೆಚ್ಚು ಮತದಾರರು ನಿರ್ಧರಿಸಲಿದ್ದಾರೆ.
ರಾಜ್ಯದಿಂದ ಒಟ್ಟು 45,000 ಸಿಬ್ಬಂದಿ, ಇತರ ಇಲಾಖೆಗಳ 3,000 ಸಿಬ್ಬಂದಿ, ತೆಲಂಗಾಣ ರಾಜ್ಯ ವಿಶೇಷ ಪೊಲೀಸ್ (ಟಿಎಸ್‌ಎಸ್‌ಪಿ) 50 ಕಂಪನಿಗಳು ಮತ್ತು ಕೇಂದ್ರ ಅರೆಸೇನಾ ಪಡೆಗಳ 375 ಕಂಪನಿಗಳನ್ನು ನಿಯೋಜಿಸಲಾಗಿದೆ. ನೆರೆಯ ರಾಜ್ಯಗಳ 23,500 ಗೃಹರಕ್ಷಕರೂ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ವಿಕಾಸ್ ರಾಜ್ ತಿಳಿಸಿದ್ದಾರೆ.