ಸುಪ್ರೀಂ ಕೋರ್ಟ್’ಗೆ ಬೇಷರತ್ ಕ್ಷಮೆ ಕೇಳಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ

Prasthutha|

ನವದೆಹಲಿ: ಬಿಆರ್ ಎಸ್ ಪಕ್ಷದ ನಾಯಕಿ ಕೆ.ಕವಿತಾ ಅವರಿಗೆ ಜಾಮೀನು ಕುರಿತು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರು ನೀಡಿದ್ದ ಹೇಳಿಕೆಗೆ ಸುಪ್ರೀಂ ಕೋರ್ಟ್ ಕಿಡಿಕಾರಿದೆ.
ಇದರ ಬೆನ್ನಲ್ಲೇ ರೇವಂತ್ ರೆಡ್ಡಿ ಅವರು ಇಂದು (ಶುಕ್ರವಾರ) ಸುಪ್ರೀಂ ಕೋರ್ಟ್ ಗೆ ಬೇಷರತ್ ಕ್ಷಮೆ ಕೇಳಿದ್ದಾರೆ.

- Advertisement -


‘ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಅತ್ಯುನ್ನತ ಗೌರವ ಮತ್ತು ಸಂಪೂರ್ಣ ನಂಬಿಕೆ ಇದೆ. ಆಗಸ್ಟ್ 29ರಂದು ಪ್ರಕಟಗೊಂಡ ಕೆಲವು ಪತ್ರಿಕಾ ವರದಿಗಳು ನನಗೆ ಸಂಬಂಧಿಸಿದ ಕಾಮೆಂಟ್ ಗಳನ್ನು ಒಳಗೊಂಡಿವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಜತೆಗೆ, ನಾನು ಗೌರವಾನ್ವಿತ ನ್ಯಾಯಾಂಗ ವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದೇನೆ ಎಂಬ ಭಾವನೆಯನ್ನು ನೀಡಿದೆ. ನಾನು ನ್ಯಾಯಾಂಗ ಪ್ರಕ್ರಿಯೆಯಲ್ಲಿ ದೃಢ ನಂಬಿಕೆಯುಳ್ಳವನು ಎಂದು ಪುನರುಚ್ಚರಿಸುತ್ತೇನೆ’ ಎಂದು ರೇವಂತ್ ರೆಡ್ಡಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.


‘ನ್ಯಾಯಾಂಗ ಮತ್ತು ಅದರ ಸ್ವಾತಂತ್ರ್ಯಕ್ಕಾಗಿ ಭಾರತದ ಸಂವಿಧಾನ ಮತ್ತು ಅದರ ನೀತಿಗಳಲ್ಲಿ ದೃಢ ನಂಬಿಕೆಯುಳ್ಳವನಾಗಿ, ನಾನು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ಮುಂದಿನ ದಿನಗಳಲ್ಲೂ ಇದನ್ನೇ ಮುಂದುವರಿಸುತ್ತೇನೆ’ ಎಂದು ರೆಡ್ಡಿ ತಿಳಿಸಿದ್ದಾರೆ.

- Advertisement -


ಬಿಆರ್ ಎಸ್ ಪಕ್ಷದ ನಾಯಕಿ ಕೆ.ಕವಿತಾ ಅವರಿಗೆ ಜಾಮೀನು ಕುರಿತು ಪ್ರತಿಕ್ರಿಯಿಸಿದ್ದ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ, ಜಾಮೀನು ಪಡೆಯಲು ಬಿಜೆಪಿ ಮತ್ತು ಬಿಆರ್ಎಸ್ ನಡುವಿನ ಸಂಧಾನ ಕಾರಣವಾಗಿರಬಹುದು ಎಂದು ಹೇಳಿಕೆ ನೀಡಿದ್ದರು. ರೇವಂತ ರೆಡ್ಡಿ ಅವರ ಹೇಳಿಕೆಗೆ ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ‘ಇಂತಹ ಹೇಳಿಕೆಗಳು ಜನರ ಮನಸ್ಸಿನಲ್ಲಿ ಅನುಮಾನಗಳನ್ನು ಮೂಡಿಸುತ್ತವೆ’ ಎಂದು ಅಭಿಪ್ರಾಯಪಟ್ಟಿತ್ತು.



Join Whatsapp