ಹೈದರಾಬಾದ್: ಕೋಮು ಪ್ರಚೋದನಾಕಾರಿ ಭಾಷಣಕ್ಕೆ ಹೆಸರುವಾಸಿಯಾದ ಬಿಜೆಪಿಯ ಗೋಶಾಮಹಲ್ ಶಾಸಕ ರಾಜಾ ಸಿಂಗ್ ಅವರನ್ನು ಯಲ್ಲರೆಡ್ಡಿಪೇಟೆ ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇತ್ತೀಚೆಗೆ ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯ ಯಲ್ಲರೆಡ್ಡಿಪೇಟೆಯಲ್ಲಿ ಟಿ.ಆರ್.ಎಸ್ ಕಾರ್ಯಕರ್ತರೊಂದಿಗೆ ನಡೆದ ಘರ್ಷಣೆಯಲ್ಲಿ ಗಾಯಗೊಂಡ ಕಾರ್ಯಕರ್ತರನ್ನು ಭೇಟಿಯಾಗಲು ತೆರಳುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ತನ್ನ ಬಂಧನದ ಕುರಿತು ಪ್ರತಿಕ್ರಿಯಿಸಿದ ರಾಜಾ ಸಿಂಗ್, ಸರ್ಕಾರವು ಪೊಲೀಸ್ ಠಾಣೆಯಲ್ಲಿ ಟಿ.ಆರ್.ಎಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರಿಗೆ ಹಲ್ಲೆ ನಡೆಸಿದಾಗ ಯಾವುದೇ ರೀತಿಯಲ್ಲಿ ಕಾಳಜಿ ವಹಿಸಿಲ್ಲ. ಪ್ರಸಕ್ತ ಈಗ ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾಗದಂತೆ ತಡೆದು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ತನ್ನ ಬಂಧನವನ್ನು ಅಕ್ರಮವೆಂದು ಜರಿದ ರಾಜಾ ಸಿಂಗ್, ಪೊಲೀಸರ ನಡೆಯನ್ನು ಖಂಡಿಸಿದ್ದಾರೆ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಅವರು ಬಣ್ಣಿಸಿದ್ದಾರೆ.