‘ನಾನು ತೇಜಸ್ವಿ ಯಾದವ್ ಮಾತನಾಡುತ್ತಿರುವುದು!’ | ಆರ್ ಜೆಡಿ ನಾಯಕನ ಈ ಫೋನ್ ಕರೆ ಎಲ್ಲೆಡೆ ವೈರಲ್ ಆಗಲು ಕಾರಣವೇನು?

Prasthutha|

ಪಾಟ್ನಾ : ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ನಾಯಕ ತೇಜಸ್ವಿ ಯಾದವ್ ಅವರು ಬಿಹಾರದ ಹಿರಿಯ ಅಧಿಕಾರಿಯೊಬ್ಬರೊಂದಿಗೆ ಫೋನ್ ನಲ್ಲಿ ಮಾತನಾಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

- Advertisement -

ಪಾಟ್ನಾದಲ್ಲಿ ಶಿಕ್ಷಕರ ಪ್ರತಿಭಟನೆ ನಡೆಯುತ್ತಿತ್ತು. ಶಿಕ್ಷಕರಿಗೆ ಬೆಂಬಲ ಸೂಚಿಸಲು ತೇಜಸ್ವಿ ಯಾದವ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದರು.

ಶಿಕ್ಷಕರು ಪ್ರತಿಭಟನೆ ನಡೆಸಲುದ್ದೇಶಿಸಿದ್ದ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ನಿರಾಕರಿಸಲಾಗಿತ್ತು. ಹೀಗಾಗಿ, ತೇಜಸ್ವಿ ಯಾದವ್ ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಗೆ ಫೋನ್ ಮಾಡಿ, ಪ್ರತಿಭಟನಕಾರರಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಬೇಕೆಂದು ಕೋರಿದ್ದರು.

- Advertisement -

ಈ ಕುರಿತ ವೀಡಿಯೊವೊಂದು ವೈರಲ್ ಆಗಿದೆ. ವೀಡಿಯೊದಲ್ಲಿ ಚಂದ್ರಶೇಖರ್ ಸಿಂಗ್ ಜೊತೆ ಯಾದವ್ ಮಾತನಾಡುತ್ತಿರುವುದು ಕಂಡುಬಂದಿದೆ. ಶಿಕ್ಷಕರು ಪ್ರತಿಭಟನೆ ನಡೆಸಲು ದಿನ ನಿತ್ಯ ಅನುಮತಿ ಪಡೆಯಬೇಕೇ ಎಂದು ಯಾದವ್ ಪ್ರಶ್ನಿಸುತ್ತಾರೆ.

“ಲಾಠಿಚಾರ್ಜ್ ಕೂಡ ನಡೆದಿದೆ. ಅವರ ಆಹಾರಗಳನ್ನು ಎಸೆಯಲಾಗಿದೆ. ಅವರನ್ನು ಹೊರಹಾಕಲಾಗಿದೆ. ಅವರಲ್ಲಿ ಕೆಲವರು ಈಗ ಇಕೊ ಪಾರ್ಕ್ ನಲ್ಲಿದ್ದಾರೆ. ಅವರಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಬೇಕೆಂದು ಅವರು ಬಯಸಿದ್ದಾರೆ” ಎಂದು ಯಾದವ್ ಫೋನ್ ನಲ್ಲಿ ಹೇಳುತ್ತಾರೆ.

“ವಾಟ್ಸಪ್ ನಲ್ಲಿ ಅರ್ಜಿ ಕಳುಹಿಸುತ್ತೇನೆ” ಎಂದು ಯಾದವ್ ಹೇಳುತ್ತಾರೆ. ಬಳಿಕ, ಯಾವಾಗ ನಿಮ್ಮಿಂದ ಉತ್ತರ ದೊರೆಯುತ್ತದೆ ಎಂದು ತೇಜಸ್ವಿ ಕೇಳಿದಾಗ, ಅಧಿಕಾರಿ ಸ್ವಲ್ಪ ಜೋರು ಧ್ವನಿಯಲ್ಲಿ “ಯಾವಾಗ ಅಂದರೆ ಏನರ್ಥ? ನೀವು ಅರ್ಜಿ ಕಳುಹಿಸಿಲ್ಲ ಮತ್ತು ನನ್ನನ್ನು ಪ್ರಶ್ನಿಸುತ್ತೀರಿ” ಎಂದು ಅಧಿಕಾರಿ ಯಾದವ್ ರತ್ತ ಕಿರುಚಾಡುವ ಧ್ವನಿ ವೀಡಿಯೊದಲ್ಲಿ ಕೇಳಿಬರುತ್ತದೆ.

ಆಗ ಯಾದವ್ ತನ್ನನ್ನು ಪರಿಚಯಿಸಿಕೊಂಡು, “ನಾನು ತೇಜಸ್ವಿ ಯಾದವ್ ಮಾತನಾಡುತ್ತಿರುವುದು ಜಿಲ್ಲಾಧಿಕಾರಿಗಳೇ” ಎಂದು ಹೇಳುತ್ತಾರೆ.

ಆಗ, ಹಠಾತ್ ಮಾತಿನ ಶೈಲಿ ಬದಲಿಸಿದ ಜಿಲ್ಲಾಧಿಕಾರಿ, “ಆಯಿತು ಸರ್, ಆಯಿತು ಸರ್” ಎಂದು ಹೇಳುತ್ತಿರುವುದು ಕೇಳಿಬರುತ್ತದೆ. ಅಷ್ಟರಲ್ಲಿ ಅಧಿಕಾರಿಯ ಬದಲಾದ ಧ್ವನಿ ಕೇಳಿ ನೆರೆದಿದ್ದವರೆಲ್ಲಾ ಅಲ್ಲಿ ಜೋರಾಗಿ ನಗುತ್ತಾರೆ.

ಕೆಲವೇ ಸೀಟುಗಳ ಕೊರತೆಯಿಂದ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರುವ ತೇಜಸ್ವಿ ಯಾದವ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ತೇಜಸ್ವಿ ಯಾದವ್ ಯಾಕೆ ಹೆಚ್ಚು ಜನಪ್ರಿಯರಾಗುತ್ತಿದ್ದಾರೆ ಎಂಬುದಕ್ಕೆ ಇದು ಉದಾಹರಣೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.   



Join Whatsapp