1000ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಸುಲಭ ಜಯ

Prasthutha|

ಹೈದರಾಬಾದ್: ಕ್ರಿಕೆಟ್ ಇತಿಹಾಸದಲ್ಲಿಯೇ ಒಂದು ಸಾವಿರ ಏಕದಿನ ಪಂದ್ಯಗಳನ್ನು ಆಡಿದ ಮೊದಲ ತಂಡ ಎಂಬ ಕೀರ್ತಿಗೆ ಪಾತ್ರವಾಗಿರುವ ಟೀಮ್ ಇಂಡಿಯಾ, ತನ್ನ 1000ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ 6 ವಿಕೆಟ್’ಗಳ ಭರ್ಜರಿ ಗೆಲುವು ಸಾಧಿಸಿದೆ.

- Advertisement -


ಮೊಟೇರಾದ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐತಿಹಾಸಿಕ ಪಂದ್ಯದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದ್ದ ಭಾರತ, ಎದುರಾಳಿ ವೆಸ್ಟ್ ಇಂಡೀಸ್ ತಂಡವನ್ನು 43.5 ಓವರ್’ಗಳಲ್ಲಿ 176 ರನ್’ಗಳಿಗೆ ನಿಯಂತ್ರಿಸಿತ್ತು. ಸುಲಭ ಗುರಿಯನ್ನು ಕೇವಲ 28 ಓವರ್‌ಗಳಲ್ಲಿ , 4 ವಿಕೆಟ್ ನಷ್ಟದಲ್ಲಿ 178 ರನ್’ಗಳಿಸಿದ ರೋಹಿತ್ ಪಡೆ ಗೆಲುವಿನ ನಗೆ ಬೀರಿತು.
ಭಾರತದ ಪರ ಯಶಸ್ವಿ ದಾಳಿ ಸಂಘಟಿಸಿದ ಯಜುವೇಂದ್ರ ಚಹಾಲ್‌ 4 ವಿಕೆಟ್‌ ಗಳಿಸಿದರೆ, ವಾಷಿಂಗ್ಟನ್‌ ಸುಂದರ್‌ ಮೂರು ಹಾಗೂ ಪ್ರಸಿದ್ಧ್ ಕೃಷ್ಣ 2 ವಿಕೆಟ್‌ ಪಡೆದರು.

1000 ಏಕದಿನ ಪಂದ್ಯಗಳನ್ನಾಡಿದ ಮೊದಲ ತಂಡ !

- Advertisement -

ಈ ಪಂದ್ಯದ ಮೂಲಕ ಕ್ರಿಕೆಟ್ ಚರಿತ್ರೆಯಲ್ಲಿ 1,000 ಏಕದಿನ ಪಂದ್ಯಗಳನ್ನಾಡಿದ ವಿಶ್ವದ ಮೊದಲ ತಂಡ ಎಂಬ ಖ್ಯಾತಿಯು ಟೀಮ್ ಇಂಡಿಯಾ ಪಾಲಾಗಿದೆ. 958 ಪಂದ್ಯಗಳನ್ನು ಆಡಿರುವ ಆಸ್ಟ್ರೇಲಿಯಾ ಮತ್ತು 936 ಪಂದ್ಯವನ್ನಾಡಿರುವ ಪಾಕಿಸ್ತಾನ ಹೆಚ್ಚು ಏಕದಿನ ಪಂದ್ಯಗಳನ್ನಾಡಿದ ರಾಷ್ಟ್ರಗಳ ಪಟ್ಟಿಯಲ್ಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.

ಉಪನಾಯಕ ಹಾಗೂ ಆರಂಭಿಕ ಆಟಗಾರ ಕೆ.ಎಲ್.‌ ರಾಹುಲ್ ಈ ಪಂದ್ಯದಿಂದ ಹೊರಗುಳಿದಿದ್ದು, ನಾಯಕ ರೋಹಿತ್‌ ಶರ್ಮಾ ಜೊತೆಗೆ ಇಶಾನ್‌ ಕಿಶನ್‌ ಇನಿಂಗ್ಸ್‌ ಆರಂಭಿಸಿದ್ದರು. ರೋಹಿತ್ 60 ಹಾಗೂ ಕಿಶನ್ 28 ರನ್ ಗಳಿಸಿದರೆ, ಮಾಜಿ ನಾಯಕ ವಿರಾಟ್ ಕೊಹ್ಲಿ 8 ರನ್ ಗಳಿಸಿ ಜೋಸೆಫ್’ಗೆ ವಿಕೆಟ್ ಒಪ್ಪಿಸಿದರು.
ಕೊನೆಯಲ್ಲಿ ಸೂರ್ಯಕುಮಾರ್‌ ಯಾದವ್‌ ಮತ್ತು ದೀಪಕ್‌ ಹೂಡಾ ಔಟಾಗದೇ ಕ್ರಮವಾಗಿ 34 ಹಾಗೂ 26 ರನ್’ಗಳಿಸಿ ಗೆಲುವಿನ ಗುರಿ ತಲುಪಿಸಿದರು.



Join Whatsapp