ಆಸ್ಟ್ರೇಲಿಯಾ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದ ಟೀಮ್ ಇಂಡಿಯಾ

Prasthutha|

ಸೆಂಟ್ ಲೂಸಿಯಾ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಟೀಮ್ ಇಂಡಿಯಾ ಸೆಮಿ ಫೈನಲ್‌ಗೆ ಪ್ರವೇಶಿಸಿದೆ.

- Advertisement -

ಇಂದು ಸೆಂಟ್ ಲೂಸಿಯಾದ ಡರೆನ್ ಸಮಿ ಕ್ರೀಡಾಂಗಣದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಭಾರತ ನೀಡಿದ್ದ 206ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್ ನಲ್ಲಿ 181 ರನ್ ಗಳಿಸಿ 24 ರನ್ ಗಳ ಅಂತರದಲ್ಲಿ ಸೋಲು ಕಂಡಿದೆ‌.

ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್‌ನಲ್ಲಿರುವ ಡ್ಯಾರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸೂಪರ್ ಸುತ್ತಿನ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಅಮೋಘ ಗೆಲುವು ದಾಖಲಿಸಿದೆ. ಇದರೊಂದಿಗೆ ಅಜೇಯ ತಂಡವಾಗಿ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. ಇಷ್ಟು ಮಾತ್ರವಲ್ಲದೆ, ಏಕದಿನ ವಿಶ್ವಕಪ್​ನ ಫೈನಲ್​ ಸೋಲಿಗೆ ಟೀಂ ಇಂಡಿಯಾ ಸರಿಯಾಗಿ ಸೇಡು ತೀರಿಸಿಸಿಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 20 ಓವರ್​ಗಳಲ್ಲಿ ಅಂತಿಮವಾಗಿ 7 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಇದೀಗ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್​ ತಂಡವನ್ನು ಎದುರಿಸಲಿದೆ.

- Advertisement -

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಟೀಂ ಇಂಡಿಯಾ ನಿರಾಶಾದಾಯಕ ಆರಂಭ ಕಂಡಿತು. ಟೀಂ ಇಂಡಿಯಾ 6 ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿ ಶೂನ್ಯ ರನ್ ಗಳಿಸಿ ಔಟಾದರು. ನಂತರ ತಂಡದ ಇನ್ನಿಂಗ್ಸ್ ಕೈಗೆತ್ತಿಕೊಂಡ ನಾಯಕ ರೋಹಿತ್ ಅಬ್ಬರದ ಬ್ಯಾಟಿಂಗ್ ಆರಂಭಿಸಿ ಕೇವಲ 19 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗಿಳಿಸಿದರು. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನ ರೋಹಿತ್ ವೃತ್ತಿಜೀವನದಲ್ಲಿ ಅತ್ಯಂತ ವೇಗದ ಅರ್ಧಶತಕ ಎನಿಸಿಕೊಂಡಿತು. ಇನ್ನೊಂದು ಬದಿಯಲ್ಲಿ ರಿಷಬ್ ಪಂತ್ ಕೂಡ ಅವಕಾಶ ಸಿಕ್ಕಾಗ ಬಿಗ್ ಶಾಟ್ ಆಡಿ ತಂಡದ ಇನ್ನಿಂಗ್ಸ್​ನ ವೇಗ ಹೆಚ್ಚಿಸಿದರು. ಹೀಗಾಗಿ ಈ ಜೋಡಿ ಆಸ್ಟ್ರೇಲಿಯಾಕ್ಕೆ ತಲೆನೋವಾಗಿ ಪರಿಣಮಿಸಿದ್ದರು. ಆದರೆ ಈ ವೇಳೆ 15 ರನ್ ಬಾರಿಸಿದ್ದ ಪಂತ್, ಮಾರ್ಕಸ್ ಸ್ಟೊಯಿನಿಸ್​ಗೆ ಬಲಿಯಾದರು. ಇಷ್ಟರೊಳಗೆ ರೋಹಿತ್ ಮತ್ತು ಪಂತ್ ನಡುವೆ ಎರಡನೇ ವಿಕೆಟ್‌ಗೆ 87 ರನ್‌ಗಳ ಜೊತೆಯಾಟ ಕಂಡು ಬಂದಿತ್ತು.

ಪಂತ್ ವಿಕೆಟ್ ಬಳಿಕ ಅಖಾಡಕ್ಕಿಳಿದ ಸೂರ್ಯಕುಮಾರ್ ಯಾದವ್, ರೋಹಿತ್ ಜೊತೆಗೂಡಿ ವೇಗವಾಗಿ ರನ್ ಕಲೆಹಾಕಿದರು. ಈ ವೇಳೆ ರೋಹಿತ್‌ಗೆ ವಿಶ್ವಕಪ್‌ನಲ್ಲಿ ವೇಗದ ಶತಕ ಬಾರಿಸುವ ಅವಕಾಶವಿತ್ತು. ಆದರೆ ರೋಹಿತ್ ನರ್ವಸ್ ನೈಂಟಿಗೆ ಬಲಿಯಾದರು. ರೋಹಿತ್ 41 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ 90 ರನ್ ಗಳಿಸಿ ಮಿಚೆಲ್ ಸ್ಟಾರ್ಕ್​ ಎಸೆತದಲ್ಲಿ ಔಟಾದರು. ರೋಹಿತ್ ನಂತರ ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ಸಣ್ಣ ಆದರೆ ಪ್ರಮುಖ ನಾಕ್‌ಗಳನ್ನು ಆಡಿದರು. ಇದರಿಂದಾಗಿ ಟೀಂ ಇಂಡಿಯಾ 200ರ ಗಡಿ ತಲುಪಲು ಸಾಧ್ಯವಾಯಿತು.

ತಂಡದ ಪರ ಸೂರ್ಯಕುಮಾರ್ ಯಾದವ್ 31 ರನ್ ಮತ್ತು ಶಿವಂ ದುಬೆ 28 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ತಲಾ 27 ರನ್ ಮತ್ತು 9 ರನ್ ಬಾರಿಸಿ ಅಜೇಯರಾಗಿ ಮರಳಿದರು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಮತ್ತು ಮಾರ್ಕಸ್ ಸ್ಟೊಯಿನಿಸ್ ತಲಾ 2 ವಿಕೆಟ್ ಪಡೆದರೆ, ಜೋಶ್ ಹ್ಯಾಜಲ್‌ವುಡ್ 1 ವಿಕೆಟ್ ಪಡೆದರು.

Join Whatsapp