ಬಾರ್ಬಡೋಸ್: ಬೆರಿಲ್ ಚಂಡಮಾರುತದ ಪರಿಣಾಮ ಬಾರ್ಬಡೋಸ್‌ನಲ್ಲಿಯೇ ಸಿಲುಕಿದ್ದ ಟಿ20 ವಿಶ್ವಕಪ್ ವಿಜೇತ ಭಾರತ ತಂಡ ಇಂದು ಚಾರ್ಟರ್ ವಿಮಾನದಲ್ಲಿ ಸ್ವದೇಶಕ್ಕೆ ತಲುಪಲಿದೆ. ಈ ಬಗ್ಗೆ ಬಾರ್ಬಾಡೋಸ್ ಪ್ರಧಾನಿ ಮಿಯಾ ಮೋಟ್ಲಿ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್ ಫೈನಲ್ ಪಂದ್ಯವನ್ನು ಏಳು ರನ್‌ಗಳಿಂದ ಗೆದ್ದ ನಂತರ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ, ಸಹಾಯಕ ಸಿಬ್ಬಂದಿ, ಬಿಸಿಸಿಐ ಅಧಿಕಾರಿಗಳು ಸೇರಿದಂತೆ ಆಟಗಾರರ ಕುಟುಂಬದ ಸದಸ್ಯರು ಬಾರ್ಬಡೋಸ್‌ನಲ್ಲಿಯೇ ಉಳಿದಿದ್ದರು.
ಬೆರಿಲ್ ಚಂಡಮಾರುತವು ಬಾರ್ಬಬಡೋಸ್ ಮತ್ತು ಸಮೀಪದ ದ್ವೀಪಗಳಿಗೆ ಸೋಮವಾರ ಅಪ್ಪಳಿಸಿದೆ. ಸುಮಾರು ಮೂರು ಲಕ್ಷ ಜನಸಂಖ್ಯೆಯಿರುವ ದೇಶ ಭಾನುವಾರ ಸಂಜೆಯಿಂದಲೇ ಸ್ತಬ್ಧಗೊಂಡಿದೆ. ವಿಮಾನ ನಿಲ್ದಾಣ ಮುಚ್ಚಲಾಗಿದೆ.
ಭಾರತ ತಂಡದ ಸದಸ್ಯರು ಬ್ರಿಜ್‌ಟೌನ್‌ನಿಂದ ಇಂದು ಸಂಜೆ ಅಪರಾಹ್ನ 7.45ಕ್ಕೆ ದೆಹಲಿ ತಲುಪುವ ನಿರೀಕ್ಷೆ ಇದೆ.