ಕಿವೀಸ್ ನಾಟಕೀಯ ಕುಸಿತ: ಟೀಮ್ ಇಂಡಿಯಾಗೆ 63 ರನ್’ಗಳ ಮುನ್ನಡೆ

Prasthutha|

ಕಾನ್ಪುರ: ಸ್ಪಿನ್ನರ್ ಅಕ್ಷರ್ ಪಟೇಲ್ ದಾಖಲೆಯ ಐದು ವಿಕೆಟ್‌ ಸಾಧನೆಯ ಬಲದಲ್ಲಿ ಬೀಗಿದ ಭಾರತ, ಕಿವೀಸ್ ವಿರುದ್ಧದ ಮೊದಲ ಟೆಸ್ಟ್’ನಲ್ಲಿ ಮೂರನೇ ದಿನದಾಟದ ಅಂತ್ಯಕ್ಕೆ 63 ರನ್‌’ಗಳ ಮುನ್ನಡೆ ಪಡೆದಿದೆ.

- Advertisement -

ವಿಕೆಟ್ ನಷ್ಟವಿಲ್ಲದೆ 129 ರನ್’ಗಳಿಂದ ದಿನದಾಟ ಆರಂಭಿಸಿದ ನ್ಯೂಜಿಲೆಂಡ್, 151 ರನ್ ತಲುಪಿದ್ದ ವೇಳೆ ಆರ್. ಅಶ್ವಿನ್ ಮೊದಲ ಬಲಿ ಪಡೆದರು. 89 ರನ್’ಗಳಿಸಿದ್ದ ವಿಲ್‌ ಯಂಗ್ ಎಸ್. ಭರತ್ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಟಾಮ್ ಲಥಾಮ್ ಜೊತೆಗೂಡಿದ ಕ್ಯಾಪ್ಟನ್ ವಿಲಿಯಮ್ಸನ್ 197ರನ್’ವರೆಗೂ ತಾಳ್ಮೆಯ ಬ್ಯಾಟಿಂಗ್ ನಡೆಸಿದರು. ಈ ವೇಳೆ ಉಮೇಶ್ ಯಾದವ್ ಬೌಲಿಂಗ್’ನಲ್ಲಿ ಕ್ಯಾಪ್ಟನ್ ವಿಲಿಯಮ್ಸನ್ LBW ಬಲೆಯಲ್ಲಿ ಬಿದ್ದರು. ಬೃಹತ್ ಮೊತ್ತ ಕಲೆಹಾಕುವ ಕಿವೀಸ್ ಲೆಕ್ಕಾಚಾರವನ್ನು ಭಾರತದ ಸ್ಪಿನ್ ಬೌಲರ್’ಗಳು ತಲೆಕೆಳಗಾಗಿಸಿದರು.

2 ವಿಕೆಟ್‌ ನಷ್ಟದಲ್ಲಿ 197 ರನ್’ಗಳಿಸಿ ಸುಸ್ಥಿತಿಯಲ್ಲಿದ್ದ ನ್ಯೂಜಿಲೆಂಡ್, ಬಳಿಕ 99 ರನ್ ಸೇರಿಸುವಷ್ಟರಲ್ಲಿ ಸರ್ವಪತನ ಕಂಡಿತು. ಆರಂಭಿಕರಾದ ವಿಲ್ ಯಂಗ್ (89) ಮತ್ತು ಲಥಾಮ್ (95) ಶತಕದ ಹೊಸ್ತಿಲಿನಲ್ಲಿ ಎಡವಿದರು. ಅಂತಿಮವಾಗಿ 142.3 ಓವರ್’ಗಳಲ್ಲಿ 296 ರನ್‌’ಗಳಿಗೆ ನ್ಯೂಜಿಲೆಂಡ್ ಆಲೌಟ್‌ ಆಯಿತು. ಆ ಮೂಲಕ ಭಾರತ ಮೊದಲ ಇನ್ನಿಂಗ್ಸ್’ನಲ್ಲಿ ಗಳಿಸಿದ್ದ 345 ರನ್ ಗಳ ಗುರಿಯಿಂದ 49 ರನ್’ಗಳ ಹಿನ್ನಡೆ ಅನುಭವಿಸಿತು.

- Advertisement -

ಅಕ್ಷರ್‌ ಪಟೇಲ್ 5 ವಿಕೆಟ್ ಹಾಗೂ ಆರ್‌. ಅಶ್ವಿನ್ 3 ವಿಕೆಟ್ ಪಡೆದು ಮಿಂಚಿದರು. ಉಮೇಶ್ ಯಾದವ್‌ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.

49 ರನ್‌ಗಳ ಮುನ್ನಡೆಯೊಂದಿಗೆ ಇನಿಂಗ್ಸ್ ಆರಂಭಿಸಿದ ಭಾರತ ಮೂರನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟದಲ್ಲಿ 14 ರನ್ ಗಳಿಸಿದೆ. ಮೊದಲ ಇನಿಂಗ್ಸ್’ನಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದ, ಶುಭ್ಮನ್ ಗಿಲ್‌ ಕೇವಲ ಶನಿವಾರ ಕೇವಲ 1 ರನ್ ಗಳಿಸುವಷ್ಟರಲ್ಲೇ ವಿಕೆಟ್ ಒಪ್ಪಿಸಿದರು. 4 ರನ್ ಗಳಿಸಿರುವ ಮಯಾಂಕ್ ಅಗರ್’ವಾಲ್ ಹಾಗೂ 9 ರನ್’ಗಳಿಸಿರುವ ಚೇತೇಶ್ವರ ಪುಜಾರ ಭಾನುವಾರ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.

ನಾಲ್ಕನೇ ಟೆಸ್ಟ್ ಪಂದ್ಯದಲ್ಲೇ ಅಕ್ಷರ್‌ ಪಟೇಲ್ ದಾಖಲೆ

ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಲ್ಕನೇ ಪಂದ್ಯವನ್ನಾಡುತ್ತಿರುವ ಅಕ್ಷರ್ ಪಟೇಲ್, ಐದನೇ ಬಾರಿಗೆ ಇನಿಂಗ್ಸ್‌ ಒಂದರಲ್ಲಿ 5 ವಿಕೆಟ್‌ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಬೌಲರ್ ಎನಿಸಿಕೊಂಡರು. 1978ರಲ್ಲಿ ಆಸ್ಟ್ರೇಲಿಯಾದ ವೇಗಿ ಚಾರ್ಲಿ ಟರ್ನರ್ ಮೊದಲ ನಾಲ್ಕು ಪಂದ್ಯಗಳಲ್ಲಿ 6 ಬಾರಿ 5 ವಿಕೆಟ್‌ ಕಬಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅದಾದ ಬಳಿಕ ಇಂಗ್ಲೆಂಡ್‌ನ ಟಾಮ್ ರಿಚರ್ಡ್‌ಸನ್‌ (1887-1888), ಆಸಿಸ್‌ನ ರಾಡ್ನಿ ಹಾಗ್ (1893-1895) ನಾಲ್ಕು ಟೆಸ್ಟ್ ಪಂದ್ಯಗಳ 5 ಇನಿಂಗ್ಸ್‌’ನಲ್ಲಿ ಈ ಸಾಧನೆ ಮಾಡಿದ್ದರು.

Join Whatsapp