ಕನ್ನಡಿಗ ರಾಹುಲ್ ಬಿರುಗಾಳಿ: 6.3 ಓವರ್’ಗಳಲ್ಲಿ ಖೇಲ್ ಖತಂ !

Prasthutha|

ದುಬೈ: ಸ್ಕಾಟ್ಲೆಂಡ್ ಬೌಲಿಂಗ್’ಅನ್ನು ಧೂಳಿಪಟ ಮಾಡಿದ ಟೀಮ್ ಇಂಡಿಯಾ ಕೇವಲ 6.3 ಓವರ್’ಗಳಲ್ಲಿ ಪಂದ್ಯ ಗೆದ್ದು ಬೀಗಿದೆ. ಐಸಿಸಿ ಟಿ-20 ವಿಶ್ವಕಪ್’ ಟೂರ್ನಿಯ ದುಬೈನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಗೆಲುವಿಗೆ ಸ್ಕಾಟ್ಲೆಂಡ್ 85 ರನ್’ಗಳ ಸವಾಲು ನೀಡಿತ್ತು. ಆದರೆ ಸುಲಭದ ಗುರಿಯನ್ನು ಕೇವಲ 6.3 ಓವರ್’ಗಳಲ್ಲಿ 2 ವಿಕೆಟ್ ನಷ್ಟದಲ್ಲಿ ತಲುಪಿದ ಟೀಮ್ ಇಂಡಿಯಾ 8 ವಿಕೆಟ್’ಗಳ ಭರ್ಜರಿ ಗೆಲುವು ದಾಖಿಸಿದೆ.

- Advertisement -

ಕನ್ನಡಿಗ ಕೆ.ಎಲ್.ರಾಹುಲ್ 3 ಭರ್ಜರಿ ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನಿಂದ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರೆ. ರೋಹಿತ್ ಶರ್ಮಾ 16 ಎಸೆತಗಳಲ್ಲಿ 30 ರನ್’ಗಳಿಸಿದ್ದಾಗ ಬ್ರಾಡ್ ವೀಲ್ ಎಸೆತದಲ್ಲಿ ಎಲ್’ಬಿ’ಡಬ್ಲ್ಯೂ ಆದರು.  ಬಳಿಕ ಕೊಹ್ಲಿ ಹಾಗೂ ಸುರ್ಯಕುಮಾರ್ ಯಾದವ್ ಗೆಲುವಿನ ಔಪಚಾರಿಕತೆಯನ್ನು ಪೂರ್ತಿಗೊಳಿಸಿದರು.

ಸೂಪರ್-12 ಹಂತದ 4ನೇ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್’ಗಳ ಅಂತರದಲ್ಲಿ ಭಾರೀ ಗೆಲುವು ಸಾಧಿಸಿದ್ದರೂ, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 8 ಅಂಕಗಳೊಂದಿಗೆ ಪಾಕಿಸ್ತಾನ ಮೊದಲನೇ ಹಾಗೂ 6 ಅಂಕಗಳೊಂದಿಗೆ ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದೆ.

- Advertisement -

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್’ಗೆ ಇಳಿಸಲ್ಪಟ್ಟಿದ್ದ ಸ್ಕಾಟ್ಲೆಂಡ್, ಭಾರತದ ಬಿಗು ಬೌಲಿಂಗ್ ದಾಳಿಗೆ ಬೆದರಿ ಕೇವಲ 85 ರನ್’ಗಳಿಸುವಷ್ಟರಲ್ಲೇ ಸರ್ವ ಪತನ ಕಂಡಿತ್ತು. ಮುಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ತಲಾ 3 ವಿಕೆಟ್’ಗಳನ್ನು ಪಡೆದರೆ, ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು.

ಸ್ಕಾಟ್ಲೆಂಡ್ ಬ್ಯಾಟಿಂಗ್’ನಲ್ಲಿ ಮೂವರು ಬ್ಯಾಟರ್’ಗಳು ಶೂನ್ಯಕ್ಕೆ ನಿರ್ಗಮಿಸಿದರೆ, ಮೂವರು ಎರಡಂಕಿಯ ಮೊತ್ತವನ್ನು ತಲುಪಲಿಲ್ಲ.  ಸ್ಕಾಟ್ಲೆಂಡ್ ವಿರುದ್ಧ ಭಾರತ ಭಾರಿ ಅಂತರದ ಗೆಲುವು ದಾಖಲಿಸಿದರೂ ಸೆಮಿಫೈನಲ್’ನಲ್ಲಿ ಸ್ಥಾನ ಪಡೆಯುವುದು ಬಹುತೇಕ ಸಂಶಯವೇ ಆಗಿದೆ. ನ್ಯೂಜಿಲೆಂಡ್ ತಂಡ ಸೋಲು ಕಂಡರಷ್ಟೇ ಭಾರತಕ್ಕೆ ಅವಕಾಶ ಸಿಗಲಿದೆ.



Join Whatsapp