ಹುಬ್ಬಳ್ಳಿ: ನನ್ನ ಚಲನವಲನಗಳ ಬಗ್ಗೆ ತಿಳಿಯಲು ನಾಗಪುರದಿಂದ ತಂಡವನ್ನು ಕಳುಹಿಸಿದ್ದಾರೆ. ಇದಕ್ಕೆಲ್ಲ ನಾನು ಹೆದರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ನಾಗಪುರದಿಂದ ಯಾರೇ ಬಂದರೂ, ನನ್ನ ವಿರುದ್ಧ ಕೆಲಸ ಮಾಡಿದರೂ ಪ್ರಯೋಜವಾಗುವುದಿಲ್ಲ. ಯಾಕೆಂದರೆ, ಅವರಿಗೆ ಸ್ಥಳೀಯವಾಗಿ ಯಾವ ಜ್ಞಾನವೂ ಇರುವುದಿಲ್ಲ. ಅವರು ಇಲ್ಲಿನ ಸ್ಥಿತಿ ಅಧ್ಯಯನ ಮಾಡುವ ಹೊತ್ತಿಗೆ ಚುನಾವಣೆಯೇ ಮುಗಿದಿರುತ್ತದೆ ಎಂದು ಹೇಳಿದರು.
ನಾಗಪುರದವರು ಅಭ್ಯರ್ಥಿಯ ಮೇಲೆ ನಿಗಾ ಇಟ್ಟು ಚುನಾವಣೆ ಮಾಡುವುದಾದರೆ, ಅಲ್ಲಿಯೇ ಇತ್ತೀಚೆಗೆ ನಡೆದ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಯಾಕೆ ಸೋಲು ಅನುಭವಿಸಿತು? ಎಂದು ಶೆಟ್ಟರ್ ಪ್ರಶ್ನಿಸಿದರು.
ರಾಹುಲ್ ಅವರು ರಾಜ್ಯದ ರಾಜಕಾರಣ ಹಾಗೂ ಇತರ ವಿಷಯಗಳ ಬಗ್ಗೆ ಮುಕ್ತವಾಗಿ ನನ್ನೊಂದಿಗೆ ಚರ್ಚಿಸಿದರು. ಬಿಜೆಪಿ ಒಳಗಿನ ಬೆಳವಣಿಗೆ ಮತ್ತು ಲಿಂಗಾಯತರ ಕಡೆಗಣನೆ ಬಗ್ಗೆಯೂ ಚರ್ಚೆ ನಡೆಯಿತು. ಆಗ ಶಾಸಕ ಪ್ರಸಾದ ಅಬ್ಬಯ್ಯ ಕೂಡ ಜೊತೆಗಿದ್ದರು ಎಂದು ಶೆಟ್ಟರ್ ಹೇಳಿದರು.