ಬೌದ್ಧಿಕ ಸವಾಲುಗಳ ನಡುವೆ ಶಿಕ್ಷಕರ ದಿನ

Prasthutha|

ಶಿಕ್ಷಣ ಮತ್ತು ವಿದ್ಯಾಭ್ಯಾಸ ಒಂದು ಸಮಾಜದ ಬೌದ್ಧಿಕ ಆಸ್ತಿ. ಸಮಾಜವನ್ನು, ಸಾಮಾಜಿಕ ನೆಲೆಯ ಸಾಂಸ್ಕೃತಿಕ ಅರಿವನ್ನು ಮತ್ತು ಒಂದು ನಿರ್ದಿಷ್ಟ ಸಮಾಜದ ಭೌತಿಕ ಅಸ್ತಿತ್ವವನ್ನು ನಿರ್ಧರಿಸುವುದೇ ಅಲ್ಲದೆ, ಈ ಅಸ್ತಿತ್ವಕ್ಕೆ ಕಾರಣವಾಗುವ ಸಾಮಾಜಿಕ ಒಳಸುಳಿಗಳನ್ನು ಮತ್ತು ಅಂತರ್ ಸಂಬಂಧಿತ ಒಳನೋಟಗಳನ್ನು ಗ್ರಹಿಸುವ ಒಂದು ಅಮೂಲ್ಯ ಆಕರವಾಗಿ ಶೈಕ್ಷಣಿಕ ವ್ಯವಸ್ಥೆಯೊಂದು ರೂಪುಗೊಳ್ಳುತ್ತದೆ, ರೂಪುಗೊಳ್ಳಬೇಕು. ಭಾರತದ ಸಂದರ್ಭಗಳಲ್ಲಿ ಶತಮಾನಗಳ ಕಾಲ ದೇಶದ ಬಹುಸಂಖ್ಯಾತ ಜನರನ್ನು ಈ ಆಕರದ ಪರಿಧಿಯಿಂದಲೇ ಹೊರಗಿಟ್ಟು ಸಾಮಾಜಿಕ ಅಭ್ಯುದಯದ ಹಾದಿಗಳನ್ನು ನಿರ್ಮಿಸಲಾಗಿತ್ತು ಎನ್ನುವ ಚಾರಿತ್ರಿಕ ಅರಿವಿನೊಂದಿಗೇ ನಾವು 21ನೆಯ ಶತಮಾನದಲ್ಲಿ ಈ ದಿನವನ್ನು ಆಚರಿಸಬೇಕಿದೆ.

- Advertisement -

ಭಾರತದಲ್ಲಿ ಅಧಿಕೃತವಾಗಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚೌಕಟ್ಟುಗಳಲ್ಲಿ ಹಾಗೂ ಸಾಮುದಾಯಿಕ ಪ್ರಾಬಲ್ಯದ ಭೂಮಿಕೆಯಲ್ಲಿ ಶಿಕ್ಷಣ ಎನ್ನುವ ಬೌದ್ಧಿಕ ಪ್ರಕ್ರಿಯೆಯಿಂದ ವಂಚಿತರಾದ ನೂರಾರು ಜನಸಮುದಾಯಗಳಿಗೆ ಮತ್ತು ಈ ಜನಸಮುದಾಯಗಳಲ್ಲಿನ ಮಹಿಳೆಯರಿಗೆ ಕಲಿಕೆಯ ಕಿರಿದಾರಿಗಳನ್ನು ನಿರ್ಮಿಸಿದ್ದು ಅಕ್ಷರದವ್ವ ಎಂದೇ ಗುರುತಿಸಲಾಗುವ ಸಾವಿತ್ರಿಬಾಯಿ ಫುಲೆ. ಹಾಗಾಗಿಯೇ ಇಂದು ಡಾ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆಯ ಸಂದರ್ಭಕ್ಕಿಂತಲೂ ಹೆಚ್ಚು ಅಕ್ಷರದವ್ವನ ಅಮೂಲ್ಯ ಕೊಡುಗೆ ಮುನ್ನೆಲೆಗೆ ಬರುತ್ತಿದೆ. ಈ ಆಚರಣೆಗಳನ್ನು ಸಾಂಕೇತಿಕವಾಗಿ ಚಾರಿತ್ರಿಕ ವ್ಯಕ್ತಿಗಳನ್ನು ಸ್ಮರಿಸುವ ದಿನಗಳಾಗಿ ಮಾತ್ರವೇ ಕಾಣುವುದರ ಬದಲು, ನವ ಭಾರತದ ನಿರ್ಮಾಣದ ಸಂದರ್ಭದಲ್ಲೂ ಈ ದೇಶದ ಬಹುಸಂಖ್ಯೆಯ ಜನರು ಎದುರಿಸುತ್ತಿರುವ ಕಲಿಕೆಯ ಸವಾಲುಗಳತ್ತ ಗಮನಹರಿಸುವುದು ನಮ್ಮ ಆದ್ಯತೆಯಾಗಬೇಕಿದೆ.
ಶಾಲೆ, ಕಾಲೇಜು ಮತ್ತು ವಿದ್ಯಾಕೇಂದ್ರಗಳಿಂದ ಆಚೆಗೂ ಒಂದು ಕಲಿಕೆಯ ಪ್ರಕ್ರಿಯೆ ಸಮಾಜದಲ್ಲಿ ಅಂತರ್ಗತವಾಗಿರುವುದನ್ನು ಗುರುತಿಸುವ ಮೂಲಕ, ಈ ಕಲಿಕೆಯ ಸಾಧನಗಳಿಂದ, ಪರಿಕರಗಳಿಂದ ಸಾಮಾನ್ಯ ಜನರು ಹೇಗೆ ಅವಕಾಶವಂಚಿತರಾಗುತ್ತಿದ್ದಾರೆ ಎನ್ನುವುದು ಇಂದಿನ ಸಂದರ್ಭದ ಸವಾಲು ಸಹ ಆಗಿದೆ. ಈ ಕಲಿಕೆಯ ವಾತಾವರಣವನ್ನು ಹಸನುಗೊಳಿಸುವ ನೈತಿಕ ಹೊಣೆಗಾರಿಕೆ ‘ ಕಲಿತ ’ ವರ್ಗಗಳ ಮೇಲಿರುತ್ತದೆ. ಸಾಮಾನ್ಯವಾಗಿ ಶಿಕ್ಷಕರ ದಿನವನ್ನು ನಾವು ವೃತ್ತಿನಿರತ ಶಿಕ್ಷಕ ವೃಂದದೊಡನೆ ಸಮೀಕರಿಸುತ್ತೇವೆ ಮತ್ತು ಸ್ವೀಕೃತ ಶೈಕ್ಷಣಿಕ ನೆಲೆಗಳನ್ನು ಮಾತ್ರವೇ ಪರಿಗಣಿಸುತ್ತೇವೆ. ಆದರೆ ನಮ್ಮ ಸುತ್ತಲಿನ ಸಮಾಜದಲ್ಲಿ ಬದುಕು ಕಲಿಸುವ, ಜೀವನ ಕಟ್ಟುವ ಜೀವಂತ ಕಲೆಗಳು ಹೇರಳವಾಗಿವೆ. ಆಧುನಿಕ ಸಮಾಜವೂ ನಾಗರಿಕತೆಯನ್ನು ರೂಢಿಸಿಕೊಳ್ಳಬಹುದಾದಂತಹ ಕಲಿಕೆಯ ನೆಲೆಗಳು ಜೀವಂತಿಕೆಯಿಂದ ಉಸಿರಾಡುತ್ತಿವೆ. ಈ ಶಿಕ್ಷಣದ ಆಕರಗಳೊಡನೆ ನಾವು ಮುಖಾಮುಖಿಯಾಗುತ್ತಲೇ ನಿತ್ಯ ಜೀವನ ಸವೆಸಿದರೂ ಆಧುನಿಕ ಮಾನವ ತನ್ನ ವಿದ್ಯೆ ಮತ್ತು ಬೌದ್ಧಿಕ ಚಿಂತನೆಗಳಿಗೆ ಗ್ರಾಂಥಿಕ ನೆಲೆಗಳನ್ನೇ ಅವಲಂಬಿಸಿ ಬದುಕುತ್ತಿದ್ದಾನೆ.

ಭಾರತದ ಗ್ರಾಮೀಣ ನೆಲೆಗಳಲ್ಲಿ ಮತ್ತು ನಗರೀಕೃತ ಪರಿಸರದ ಆಧುನಿಕ ನೆಲೆಗಳಲ್ಲೂ ಸಹ ಈ ಕಲಿಕೆಯ ನೆಲೆಗಳನ್ನು ನಾವು ಈ ಡಿಜಿಟಲ್ ಯುಗದಲ್ಲೂ ಗುರುತಿಸಬಹುದಾಗಿದೆ. ಅಕ್ಷರ ಜ್ಞಾನ ಇಲ್ಲದ ರೈತ, ಶಾಲೆಯ ಮೆಟ್ಟಿಲು ತುಳಿಯದ ಕುಶಲ ಕರ್ಮಿ, ತನ್ನ ಜೀವನೋಪಾಯದ ಅವಶ್ಯಕತೆಗಳನ್ನು ಮೀರಿದ ಯಾವುದನ್ನೂ ಅರಿಯದ ದಿನಗೂಲಿ ನೌಕರರು, ತಮ್ಮ ಉದರಪೋಷಣೆಗಾಗಿ ಅವಶ್ಯವಿರುವುದಷ್ಟನ್ನೇ ಕಲಿಯುವ ಕಾರ್ಮಿಕ ಇವರೆಲ್ಲರ ನಡುವೆ, ಸ್ಲೇಟು, ಬಳಪ, ಕರಿಹಲಗೆಯ ಪರಿಚಯವೇ ಇಲ್ಲದೆಯೂ ಹಲವು ಪೀಳೀಗೆಗಳಿಗೆ ಜೀವನದ ಮಾರ್ಗಗಳನ್ನು ಕಟ್ಟಿಕೊಟ್ಟ ಒಂದು ಹಿರಿಯ ಪೀಳಿಗೆ ಇಂದು ನಮ್ಮ ನಡುವೆ ಜೀವಂತಿಕೆಯಿಂದಿದೆ. ಇವರ ಪಾಲಿಗೆ ಬದುಕೇ ಶೈಕ್ಷಣಿಕ ನೆಲೆಯಾದರೆ, ಜೀವನದ ಕಡುವಾಸ್ತವಗಳೇ ಕಲಿಕೆಯ ಸಾಧನಗಳಾಗುತ್ತವೆ.
ಜಾತಿ, ಧರ್ಮ, ಲಿಂಗ ಮತ್ತು ಪ್ರಾದೇಶಿಕ ಅಸ್ಮಿತೆಗಳನ್ನು ಮೀರಿ ನಮಗೆ ಕಾಣುವ ಈ ಜೀವಗಳ ನಡುವೆ ಒಂದು ಸುಂದರ ಜ್ಞಾನಕೇಂದ್ರವನ್ನು ನಾವು ಕಲ್ಪಿಸಿಕೊಂಡಿದ್ದೇವೆಯೇ ? ಸಾಮಾನ್ಯ ಪರಿಭಾಷೆಯಲ್ಲಿ ನಮಗೆ ಸುಶಿಕ್ಷಿತರು ಎಂದರೆ ಸಾಮಾಜಿಕವಾಗಿ ನಾವು ಸ್ವೀಕರಿಸಿರುವ ಶೈಕ್ಷಣಿಕ ಕಲಿಕಾ ಕೇಂದ್ರಗಳಲ್ಲಿ ಅಕ್ಷರ ಕಲಿತವರಷ್ಟೇ ಕಾಣುತ್ತಾರೆ. ಈ ಸಂಕುಚಿತ ಚೌಕಟ್ಟಿನಿಂದಾಚೆಗೂ ವಿದ್ಯೆ ಎನ್ನುವುದನ್ನು ಮನುಷ್ಯನಿಗೆ ತನ್ನ ಜೀವನೋಪಾಯದ ಮಾರ್ಗಗಳೇ ಕಲಿಸಿರುತ್ತವೆಯಾದರೂ, ಈ ವಿದ್ಯೆಯ ನೆಲೆಗಳನ್ನು ನಮ್ಮ ಸ್ವೀಕೃತ ಶೈಕ್ಷಣಿಕ ನೆಲೆಗಳಲ್ಲಿ ನಾವು ಗುರುತಿಸಿಕೊಳ್ಳುವುದಿಲ್ಲ. ಭಾರತದಂತಹ ಸಾಂಪ್ರದಾಯಿಕ, ಶ್ರೇಣೀಕೃತ ಸಮಾಜದಲ್ಲಿ ಈ ವಿದ್ಯೆ ಎನ್ನುವುದೂ ಸಹ ಒಂದು ಒಪ್ಪಿತ ಬೌದ್ಧಿಕ ನೆಲೆಯಲ್ಲಿಯೇ ಬಂಧಿತವಾಗಿ, ನಿಷ್ಕರ್ಷೆಗೊಳಗಾಗುತ್ತಿರುತ್ತದೆ.

- Advertisement -

ಈ ಕಲಿಕೆಯ ನೆಲೆಗಳು ಎಂದಿಗೂ ನಾಶವಾಗುವುದಿಲ್ಲ ಏಕೆಂದರೆ ನಾವು ಬದುಕುವ ಸಮಾಜವನ್ನು ಕಟ್ಟಲು ಇವು ಮೂಲ ಪರಿಕರಗಳಾಗಿ, ಸಲಕರಣೆಗಳಾಗಿ ಪರಿಣಮಿಸುತ್ತವೆ. ಸಮಾಜದ ಉನ್ನತಿಯನ್ನು ಸಾಧಿಸುವುದೆಂದರೆ, ಈ ಕಲಿಕೆಯ ನೆಲೆಗಳ ಫಲಾನುಭವಿಗಳನ್ನು ಅಕ್ಷರ ಜ್ಞಾನಾಧಾರಿತ ಶೈಕ್ಷಣಿಕ ನೆಲೆಗಳೊಡನೆ ಸಮೀಕರಿಸುವುದೇ ಆಗಿರುತ್ತದೆ. ನಾಲ್ಕಕ್ಷರ ಕಲಿತು, ಸಹಿ ಮಾಡುವವರನ್ನು ಸಾಕ್ಷರರು ಎಂದು ಪರಿಭಾವಿಸುವ ಆಳುವ ವರ್ಗಗಳಿಗೆ ಈ ಉನ್ನತಿಯ ಪರಿಕಲ್ಪನೆಯೇ ಇರುವುದಿಲ್ಲ. ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿಕೆಗಳನ್ನು ಇಂದಿಗೂ ಜೀವಂತವಾಗಿರಿಸಿಕೊಂಡಿರುವ ಭಾರತದಂತಹ ಶ್ರೇಣೀಕೃತ ಸಮಾಜದಲ್ಲಿ ಈ ಪರಿಕಲ್ಪನೆ ಮೂಡಬೇಕಾದರೆ ನಾವು ಜಾತಿ ತಾರತಮ್ಯದ ನೆಲೆಗಳನ್ನು ಧ್ವಂಸಗೊಳಿಸುವುದು ಅತ್ಯವಶ್ಯ. ಇಲ್ಲವಾದರೆ ‘ ಕಲಿತವರ ’ ಸಾಮ್ರಾಜ್ಯದ ಸಾಂಸ್ಕೃತಿಕ ಪ್ರಾಬಲ್ಯ ‘ ಕಲಿಯದವರ ’ ಮೇಲೆ ಸವಾರಿ ಮಾಡುತ್ತಲೇ ದೇಶದ ಬಹುತ್ವದ ಸಾಮಾಜಿಕ ನೆಲೆಗಳನ್ನು ಧ್ವಂಸಗೊಳಿಸುತ್ತಾ ಹೋಗುತ್ತದೆ.

ಶತಮಾನಗಳ ಕಾಲ ಈ ‘ ಕಲಿಯದವರ ’ ಸಾಮ್ರಾಜ್ಯದ ಮೇಲೆ ಆಧಿಪತ್ಯ ಸಾಧಿಸಿದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಸ್ಥಾಪಿತ ಶಕ್ತಿಗಳು ಇಂದಿಗೂ ತಮ್ಮ ಜೀವಂತಿಕೆಯನ್ನು ಉಳಿಸಿಕೊಂಡಿರುವುದನ್ನು ಆಧುನಿಕ ಭಾರತದ ವೈದಿಕ ಮನಸುಗಳಲ್ಲಿ, ಮೇಲ್ಜಾತಿಯ ಧೋರಣೆಯಲ್ಲಿ ಗುರುತಿಸಬಹುದಾಗಿದೆ. ಈ ಧೋರಣೆಯೊಂದಿಗೇ ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ಇಂದಿಗೂ ಜೀವಂತವಾಗಿರುವ ಊಳಿಗಮಾನ್ಯ ವ್ಯವಸ್ಥೆ ಆಡಳಿತಾತ್ಮಕ ನೀತಿಗಳ ಮೂಲಕವೇ , ಕಲಿಕೆಯ ನೆಲೆಗಳನ್ನು ಬಹುಸಂಖ್ಯಾತ ಜನತೆಯ ಕೈಗೆಟುಕದಂತೆ ಮಾಡುತ್ತಿವೆ. ಇದರೊಂದಿಗೇ ಗ್ರಾಮೀಣ ಭಾರತದ ಜಾನಪದ ಸಂಸ್ಕೃತಿಯನ್ನು ಮತ್ತು ಕಲಿಕೆಯ ನೆಲೆಗಳನ್ನು ಆಧುನಿಕ ಔದ್ಯಮಿಕ ಜಗತ್ತಿನ ಮಾರುಕಟ್ಟೆಯೊಡನೆ ಮುಖಾಮುಖಿಯಾಗಿಸುವ ಪ್ರಯತ್ನದಲ್ಲಿ ನವ ಉದಾರವಾದ ಮತ್ತು ಡಿಜಿಲೀಕರಣದ ಔದ್ಯಮಿಕ ಕ್ರಾಂತಿ ಈ ಸ್ವಾಭಾವಿಕ ಕಲಿಕೆಯ ನೆಲೆಗಳನ್ನು ಹಂತಹಂತವಾಗಿ ಕೊಲ್ಲುತ್ತಲೇ ಬಂದಿದೆ.

ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಅಕ್ಷರದ ನೆಲೆಗಳೊಂದಿಗೆ ಕಲಿಕೆಯ ನೆಲೆಗಳನ್ನೂ ಮಾರುಕಟ್ಟೆಯ ವಶಕ್ಕೊಪ್ಪಿಸುವ ಹೊಸ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿರುವುದನ್ನು ಈ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿಸಬೇಕಿದೆ. ಸಾರ್ವಜನಿಕ ಸಂಕಥನಗಳಲ್ಲಿ ಶೈಕ್ಷಣಿಕ ವಲಯದ ವಾಣಿಜ್ಯೀಕರಣದ ಚರ್ಚೆ ಬಿರುಸಾಗಿಯೇ ನಡೆಯುತ್ತಿದೆ. ಡಿಜಿಟಲ್ ಯುಗದ ಬಂಡವಾಳ ಮಾರುಕಟ್ಟೆಗೆ ಅವಶ್ಯವಾದ ಕೌಶಲಗಳನ್ನು ಅಭಿವೃದ್ಧಿಪಡಿಸುವ ಮೂಲಕ ಆಧುನಿಕ ಜಾಗತಿಕ ಮಾರುಕಟ್ಟೆಗೆ ಧನಾರ್ಜನೆಯ ಸರಕುಗಳನ್ನು ಒದಗಿಸುವ ಒಂದು ತಂತ್ರಗಾರಿಕೆಯನ್ನು ಈ ಶಿಕ್ಷಣ ನೀತಿಯಲ್ಲಿ ಗುರುತಿಸಬಹುದು. ಬಂಡವಾಳ ವ್ಯವಸ್ಥೆಯ ಮಾರುಕಟ್ಟೆಗೆ ಉತ್ಪಾದನೆಗೆ ನೆರವಾಗುವ ಸರಕುಗಳಷ್ಟೇ ಮುಖ್ಯವಾಗುವುದರಿಂದ, ಬೌದ್ಧಿಕ ವಲಯದ ಚಿಂತನೆಯ ನೆಲೆಗಳು ನಗಣ್ಯ ಎನಿಸುತ್ತವೆ.

ಪ್ರಸ್ತುತ ಸಂದರ್ಭದಲ್ಲಿ ಈ ಚಿಂತನೆಯ ನೆಲೆಗಳನ್ನು ಒದಗಿಸುತ್ತಿರುವ ಸಾಹಿತ್ಯ, ಕಲೆ, ರಂಗಭೂಮಿ ಮತ್ತು ವಿಶ್ವವಿದ್ಯಾಲಯಗಳ ಅಧ್ಯಯನದ ನೆಲೆಗಳನ್ನೂ ಸಹ ಈ ಸರಕು ಉತ್ಪಾದನೆಗೆ ಪೂರಕವಾಗಿ ರೂಪಿಸುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿ ನೆರವಾಗಲಿದೆ. ಇದು ಬಹುಸಂಖ್ಯಾತ ಜನಸಮುದಾಯಗಳ ಬೌದ್ಧಿಕ ಮತ್ತು ಚಿಂತನೆಯ ಮೂಲ ನೆಲೆಗಳನ್ನು ಬುಡಮೇಲು ಮಾಡುವ ಶಕ್ತಿ ಕೇಂದ್ರಗಳನ್ನು ಸೃಷ್ಟಿಸುತ್ತವೆ. ಶಿಕ್ಷಣದ ವಾಣಿಜ್ಯೀಕರಣದೊಂದಿಗೆ, ವಿದ್ಯೆಯ ಯಾಂತ್ರೀಕರಣ ಪ್ರಕ್ರಿಯೆಗೆ ಚಾಲನೆ ನೀಡುತ್ತದೆ. ಈ ಪ್ರಕ್ರಿಯೆಯ ಒಂದು ಆಯಾಮವನ್ನು ಕೃತಕ ಬುದ್ಧಿಮತ್ತೆಯ (Artificial Intelelligence) ಬೆಳವಣಿಗೆಯಲ್ಲಿ ಗುರುತಿಸಬಹುದು. ಉತ್ಪಾದನಾ ಪ್ರಕ್ರಿಯೆಯ ಯಾಂತ್ರೀಕರಣ ದುಡಿಮೆಯ ಕೈಗಳನ್ನು ವಶಪಡಿಸಿಕೊಂಡಂತೆಯೇ, ವಿದ್ಯೆಯ ಡಿಜಿಟಲೀಕರಣ ಪ್ರಕ್ರಿಯೆ ಚಿಂತನೆಯ ನೆಲೆಗಳನ್ನು ಆಕ್ರಮಿಸುತ್ತಾ ಹೋಗುತ್ತದೆ.

ಇದರ ಪರಿಣಾಮ ಸಮಾಜ ಮತ್ತೊಂದು ಶ್ರೇಣೀಕರಣಕ್ಕೊಳಗಾಗುತ್ತಾ ಹೋಗುತ್ತದೆ. ಜಾತಿ ನೆಲೆಗಳಲ್ಲಿ ಅವಕಾಶವಂಚಿತರಾಗುತ್ತಿದ್ದ ಜನಸಮುದಾಯಗಳು ಹೊಸ ಮಾರುಕಟ್ಟೆ ವ್ಯವಸ್ಥೆಯಲ್ಲಿ ಹೊಸ ರೀತಿಯ ತಾರತಮ್ಯಗಳನ್ನು ಎದುರಿಸಬೇಕಾಗುತ್ತದೆ. ‘ ಪ್ರತಿಭೆ ’ ಮತ್ತು ‘ ಬುದ್ಧಿಮತ್ತೆ ’ ಯ ಪರಿಕಲ್ಪನೆಗಳು ತಮ್ಮ ಜಾತಿ ಶ್ರೇಷ್ಠತೆಯ ನೆಲೆಗಳನ್ನು ಉಳಿಸಿಕೊಂಡೇ, ಮಾರುಕಟ್ಟೆ ಆರ್ಥಿಕತೆಯಲ್ಲಿ ಮೇಲು ಕೀಲುಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ. ಸುಭದ್ರ ಆರ್ಥಿಕ ಬುನಾದಿಯಿಲ್ಲದ ಜನಸಮುದಾಯಗಳು ಮಾರಕಟ್ಟೆಯ ಪೈಪೋಟಿಯನ್ನು ಎದುರಿಸಲಾಗದೆ ಮತ್ತೊಮ್ಮೆ ಅವಕಾಶವಂಚಿತವಾಗುತ್ತವೆ. ಡಿಜಿಟಲ್ ಮಾರುಕಟ್ಟೆಗೆ ಸ್ಪಂದಿಸದ ಕಲಿಕೆಯ ನೆಲೆಗಳು ನೆನೆಗುದಿಗೆ ಬೀಳುತ್ತವೆ. ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳಲಾಗದ ಅಪಾರ ಸಂಖ್ಯೆಯ ಜನಸಮುದಾಯಗಳು ಮತ್ತೊಮ್ಮೆ ಆಧುನಿಕ ಶೈಕ್ಷಣಿಕ ನೆಲೆಗಳಿಂದ ದೂರ ಉಳಿಯಬೇಕಾಗುತ್ತದೆ. ಕೋವಿದ್ ಸಂದರ್ಭದ ಆನ್ಲೈನ್ ಶಿಕ್ಷಣದಿಂದ ವಂಚಿತರಾದ ಲಕ್ಷಾಂತರ ಮಕ್ಕಳು ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾರೆ.

ಈ ಸಂದಿಗ್ಧತೆಯ ನಡುವೆಯೇ ಕಲಿತ ವರ್ಗ ತನ್ನ ಶಿಕ್ಷಣದ ನೆಲೆಗಳಲ್ಲಿ ಅವಕಾಶವಂಚಿತರನ್ನು ತಲುಪುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನಿರಿಸಬೇಕಿದೆ. ವೃತ್ತಿಪರ ಮತ್ತು ವೃತ್ತಿಪರವಲ್ಲದ ಕಲಿಕೆಯ ನೆಲೆಗಳಲ್ಲಿ ಸಮಾಜದ ಉನ್ನತಿಗಾಗಿ, ಸಮ ಸಮಾಜದ ಕನಸುಗಳೊಂದಿಗೆ ಹೆಜ್ಜೆ ಹಾಕುತ್ತಿರುವ ‘ ಸುಶಿಕ್ಷಿತ ’ ವರ್ಗದ ಫಲಾನುಭವಿಗಳು ಈ ನಿಟ್ಟಿನಲ್ಲಿ ಗಂಭೀರ ಆಲೋಚನೆ ಮಾಡಬೇಕಿದೆ. ಸಾಂಪ್ರದಾಯಿಕ ಭಾರತವನ್ನು ಸಾಂಸ್ಕೃತಿಕವಾಗಿ ಶತಮಾನಗಳಷ್ಟು ಹಿಂದಕ್ಕೆ ಕೊಂಡೊಯ್ಯುವ ಪ್ರಯತ್ನಗಳ ನಡುವೆಯೇ ಕಲಿತ ವರ್ಗಗಳು, ಸುಶಿಕ್ಷಿತ ವಲಯದ ಚಿಂತನಾ ವಾಹಿನಿಗಳು ವೈಚಾರಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲತೆಯಿಂದ ಮುನ್ನಡೆಯಬೇಕಿದೆ. ಶಿಕ್ಷಕರ ದಿನದಂದು ನಮ್ಮನ್ನು ಕಾಡಬೇಕಿರುವುದು ಈ ಸಮಸ್ಯೆ.

ವೈಚಾರಿಕತೆ, ವೈಜ್ಞಾನಿಕ ಮನೋಭಾವವನ್ನು ಸೃಷ್ಟಿಸದೆ ಹೋದರೆ ಸಾಂಪ್ರದಾಯಿಕ ಶಕ್ತಿಗಳು ವಿಜೃಂಭಿಸುತ್ತವೆ. ಸಂಸ್ಕೃತಿ ಮತ್ತು ಮತಧಾರ್ಮಿಕ ಆಚರಣೆಗಳ ಸಂರಕ್ಷಣೆಯ ನೆಪದಲ್ಲಿ ಆಧುನಿಕ ಮನಸುಗಳನ್ನೂ ವೈಚಾರಿಕತೆಯಿಂದ ದೂರ ಮಾಡುವ ಒಂದು ವ್ಯವಸ್ಥಿತ ಹುನ್ನಾರವನ್ನು ಈ ದೇಶದ ಸಾಂಸ್ಕೃತಿಕ ರಾಜಕಾರಣ ಮಾಡುತ್ತಿದೆ. ಅವೈಜ್ಞಾನಿಕ ನಂಬಿಕೆಗಳು ಮತ್ತು ಜನಸಮುದಾಯಗಳನ್ನು ಅಂಧಕಾರಕ್ಕೆ ತಳ್ಳುವ ಮೌಢ್ಯದ ನೆಲೆಗಳನ್ನು ಅಧಿಕೃತವಾಗಿಯೇ ವಿಸ್ತರಿಸಲಾಗುತ್ತಿದೆ. ದುರಂತ ಎಂದರೆ ಈ ದೇಶದ ಅತ್ಯುನ್ನತ ಶೈಕ್ಷಣಿಕ ಕೇಂದ್ರಗಳೂ ಸಹ ಸಂಸ್ಕೃತಿ ಮತ್ತು ಪರಂಪರೆಯ ಹೆಸರಿನಲ್ಲಿ ವೈಚಾರಿಕತೆಯನ್ನು ಸಮಾಧಿ ಮಾಡುತ್ತಿವೆ. ಸಾಂಸ್ಕೃತಿಕ ರಾಜಕಾರಣದ ಆಧಿಪತ್ಯಕ್ಕೆ ಪೂರಕವಾದ ಮತಾಂಧತೆಯನ್ನು ಪೋಷಿಸುವ ನಿಟ್ಟಿನಲ್ಲಿ ಶೈಕ್ಷಣಿಕ ವಲಯವನ್ನೂ ರೂಪಿಸಲಾಗುತ್ತಿದೆ. ಹಾಗಾಗಿಯೇ ಮತಧಾರ್ಮಿಕ ಆಚರಣೆಗಳಂತೆಯೇ ಅಧ್ಯಾತ್ಮ, ಯೋಗ ಮತ್ತು ಆಧ್ಯಾತ್ಮಿಕ ನೆಲೆಗಳೂ ಸಹ ವಾಣಿಜ್ಯೀಕರಣಕ್ಕೊಳಗಾಗಿ ಮಾರುಕಟ್ಟೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ.

ಈ ಸಂದರ್ಭದಲ್ಲಿ ಆಧುನಿಕ ಶಿಕ್ಷಣ ವ್ಯವಸ್ಥೆಯ ಫಲಾನುಭವಿಗಳ ಆದ್ಯತೆಗಳೇನು? ಇದು ನಮ್ಮನ್ನು ಕಾಡಬೇಕಾದ ಗಂಭೀರ ಪ್ರಶ್ನೆ. ಪ್ರಾಥಮಿಕ ಶಿಕ್ಷಣದಿಂದ ಅತ್ಯುನ್ನತ ಅಧ್ಯಯನ ಕೇಂದ್ರಗಳವರೆಗೆ ಚಾಚಿಕೊಂಡಿರುವ ಬೌದ್ಧಿಕ ಸರಕುಗಳನ್ನು ಭಾರತದ ಅವಕಾಶವಂಚಿತ ಸಮುದಾಯಗಳಿಗೆ ಪೂರಕವಾದ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಬಳಸಲಾಗುತ್ತಿದೆಯೇ ? ಇದು ಪ್ರತಿಯೊಬ್ಬ ವೃತ್ತಿಪರ ಶಿಕ್ಷಕರ ಮನಸಿನಲ್ಲೂ ಮೂಡಬೇಕಾದ ಪ್ರಶ್ನೆ. ದಿನೇ ದಿನೇ ಹೆಚ್ಚಾಗುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ, ಜಾತಿ ದೌರ್ಜನ್ಯಗಳು, ಅತ್ಯಾಚಾರ ಪ್ರಕರಣಗಳು, ಯುವ ಸಮುದಾಯದಲ್ಲಿ ಹೆಚ್ಚಾಗುತ್ತಿರುವ ಅಪರಾಧೀಕರಣ, ಜಾತಿ ತಾರತಮ್ಯ, ಇಂದಿಗೂ ಜೀವಂತವಾಗಿರುವ ಅಸ್ಪೃಶ್ಯತೆ ಮತ್ತು ಸಾಮಾಜಿಕಾರ್ಥಿಕ ಶೋಷಣೆ ಇವೆಲ್ಲವನ್ನೂ ಗಮನಿಸಿದಾಗ, ನಮ್ಮ ಬೌದ್ಧಿಕ ವಲಯದ ವೈಫಲ್ಯ ಕಣ್ಣೆದುರು ನಿಲ್ಲುತ್ತದೆ.

ಚರಿತ್ರೆಯ ಬೌದ್ಧಿಕ ನೆಲೆಗಳಲ್ಲಿ ಅಸ್ಮಿತೆಗಳನ್ನು ಹುಡುಕುತ್ತಲೇ ಈ ಹೊತ್ತಿನ ವಾಸ್ತವಗಳಿಗೆ ವಿಮುಖವಾಗುತ್ತಿದ್ದೇವೆಯೇ ? ಇದು ಶಿಕ್ಷಕರ ದಿನದಂದು ನಮ್ಮ ಪ್ರಜ್ಞೆಯನ್ನು ಕಾಡಬೇಕಾದ ಗಂಭೀರ ಪ್ರಶ್ನೆ. ಸಾಮಾಜಿಕ ಶ್ರೇಣೀಕರಣ, ಸಾಂಸ್ಕೃತಿಕ ಶ್ರೇಷ್ಠತೆ, ನಿತ್ಯ ಬದುಕಿನ ವಾಣಿಜ್ಯೀಕರಣದ ಸವಾಲುಗಳ ನಡುವೆಯೇ, ಸಾಮಾಜಿಕ ಕಳಕಳಿ ಮತ್ತು ಪ್ರಜ್ಞೆಯನ್ನು ಜೀವಂತವಾಗಿಟ್ಟುಕೊಂಡಿರುವ ಪ್ರತಿಯೊಬ್ಬ ವ್ಯಕ್ತಿಯೂ ಇಂದು ಸಮಾಜದ ದೃಷ್ಟಿಯಿಂದ ಶಿಕ್ಷಕರಾಗಿಯೇ ಮುನ್ನಡೆಯಬೇಕಿದೆ. ಭಾರತೀಯ ಸಮಾಜದಲ್ಲಿ ಬೇರೂರಿರುವ ಮತ್ತು ಗಟ್ಟಿಯಾಗುತ್ತಿರುವ ಅವೈಚಾರಿಕ ಮೌಢ್ಯಗಳನ್ನು ತೊಡೆದುಹಾಕಿ, ಸಮಾಜವನ್ನು ಅಂಧಕಾರದಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮೂಲಕ ಮಾತ್ರವೇ ನಾವು ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಮತ್ತು ಅವರಂತಹ ಹಲವು ಚೇತನಗಳನ್ನು ಸ್ಮರಿಸಲು ಸಾಧ್ಯ. ಶಿಕ್ಷಕ ದಿನಾಚರಣೆಯ ಸಾರ್ಥಕತೆಯೂ ಇದರಲ್ಲೇ ಅಡಗಿದೆ.



Join Whatsapp