ಕಲ್ಕತ್ತ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಪಲಾಶಿಪಾರಾ ವಿಧಾನಸಭಾ ಕ್ಷೇತ್ರ ಶಾಸಕ ಮಾಣಿಕ್ ಭಟ್ಟಾಚಾರ್ಯ ಅವರನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಬಂಧಿಸಿದೆ.
ಇಡಿ ಅಧಿಕಾರಿಗಳು ರಾತ್ರೋರಾತ್ರಿ ವಿಚಾರಣೆ ನಡೆಸಿದ ನಂತರ ಪಶ್ಚಿಮ ಬಂಗಾಳ ಪ್ರಾಥಮಿಕ ಶಿಕ್ಷಣ ಮಂಡಳಿಯ ಮಾಜಿ ಅಧ್ಯಕ್ಷ ಭಟ್ಟಾಚಾರ್ಯ ಅವರನ್ನು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದ ಬಗ್ಗೆ ಇಡಿ ತನಿಖೆ ನಡೆಸುತ್ತಿದ್ದು, ಈ ಹಿಂದೆ ಭಟ್ಟಾಚಾರ್ಯ ಅವರಿಗೆ ಸಮನ್ಸ್ ನೀಡಿತ್ತು. ಇಂದು ಭಟ್ಟಾಚಾರ್ಯ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಇ.ಡಿ ಮೂಲಗಳು ತಿಳಿಸಿವೆ.
ಭಟ್ಟಾಚಾರ್ಯರ ವಾಟ್ಸಪ್ ಮಾತುಕತೆಯಲ್ಲಿ ನೇಮಕಾತಿ ಪ್ರಕರಣದಲ್ಲಿ ಭಟ್ಟಾಚಾರ್ಯರು ಭ್ರಷ್ಟಾಚಾರ ಎಸಗಿರುವುದು ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲದ ಅಧಿಕಾರಿಗಳು ತಿಳಿಸಿದ್ದಾರೆ.
ಪಾಲ್ಸಿಪಾರ ಕ್ಷೇತ್ರದ ಶಾಸಕರಾದ ಅವರನ್ನು ಈಗ ವೈದ್ಯಕೀಯ ಪರೀಕ್ಷೆಗೆ ಒಯ್ಯಲಾಗಿದ್ದು ಸಂಜೆಯೊಳಗೆ ಕೋರ್ಟಿಗೆ ಹಾಜರುಪಡಿಸುವುದಾಗಿ ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಭಟ್ಟಾಚಾರ್ಯರಿಗೆ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ವಾರ ಕಾಲ ಮುಂದೂಡಿದ್ದರೂ ಜಾರಿ ನಿರ್ದೇಶನಾಲಯದವರ ತನಿಖೆಗೆ ಸಹಕರಿಸಬೇಕು ಎಂದು ಸೆಪ್ಟೆಂಬರ್ 30ರಂದು ಸೂಚಿಸಿತ್ತು. ಅದರಂತೆ ಆ ಆದೇಶದ ಬಳಿಕ ಅವರನ್ನು ಬಂಧಿಸಲಾಗಿದೆ.
ಭ್ರಷ್ಟಾಚಾರದಲ್ಲಿ ಭಟ್ಟಾಚಾರ್ಯರರ ಹೆಸರು ಕಂಡು ಬರುತ್ತಲೇ ಅವರನ್ನು ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ತೆಗೆಯಲಾಗಿತ್ತು. ಪಾರ್ಥ ಚಟರ್ಜಿ ಮತ್ತು ಅರ್ಪಿತ ಮುಖರ್ಜಿ ಬಂಧನದ ಜೊತೆಗೆ ಭ್ರಷ್ಟಾಚಾರದಲ್ಲಿ ಭಟ್ಟಾಚಾರ್ಯರ ಹೆಸರು ತಳುಕು ಹಾಕಿಕೊಂಡಿತ್ತು.
ಸರಕಾರಿ ಶಾಲೆಗಳು ಮತ್ತು ಸರಕಾರೀ ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕಾತಿಯಲ್ಲಿ ಎಸ್ ಎಸ್ ಸಿ- ಶಾಲಾ ಸೇವಾ ಆಯೋಗದ ಮೂಲಕ ಇವರು ಭ್ರಷ್ಟಾಚಾರ ನಡೆಸಿ ನೇಮಕಾತಿ ನಡೆಸಿರುವುದಲ್ಲದೆ, ಅಕ್ರಮ ಹಣ ವರ್ಗಾವಣೆ ನಡೆಸಿರುವುದಾಗಿ ಜಾರಿ ನಿರ್ದೇಶನಾಲಯದವರು ಆರೋಪಿಸಿದ್ದಾರೆ. ಪಾರ್ಥ ಚಟರ್ಜಿ ಆಗ ಶಿಕ್ಷಣ ಮಂತ್ರಿಯಾಗಿದ್ದರು.
ಪಾರ್ಥರನ್ನು ಬಂಧಿಸಿದಾಗ ತೃಣಮೂಲ ಕಾಂಗ್ರೆಸ್ಸಿನ ಎಲ್ಲ ಹುದ್ದೆಗಳಿಂದ ಅವರನ್ನು ತೆಗೆದುಹಾಕಲಾಗಿತ್ತು ಹಾಗೂ ಪಕ್ಷದಿಂದ ವಜಾ ಮಾಡಲಾಗಿತ್ತು.
ಅದಕ್ಕೆ ಮೊದಲು ಸಿಬಿಐನವರು ಪಾರ್ಥ ಚಟರ್ಜಿ. ಎಸ್ ಎಸ್ ಸಿ ಸಲಹೆಗಾರ ಶಾಂತಿ ಪ್ರಸಾದ್ ಸಿಂಹ ಸಹಿತ 16 ಜನರ ಹೆಸರನ್ನು ಈ ಪ್ರಕರಣದಲ್ಲಿ ಆರೋಪಿಗಳು ಎಂದು ಸೂಚಿಸಿದ್ದರು. ಕೊಲ್ಕತ್ತ ಹೈಕೋರ್ಟಿನ ಆದೇಶದಂತೆ ಶಿಕ್ಷಕರ ನೇಮಕಾತಿಯಲ್ಲಿ ಹಣದ ಅಕ್ರಮದ ಬಗೆಗೆ ತನಿಖಾ ಸಂಸ್ಥೆಗಳು ತನಿಖೆ ನಡೆಸಿದ್ದವು.