ರಾಪಿಡೋ ಬೈಕ್ ಟ್ಯಾಕ್ಸಿಯನ್ನು ಸ್ಥಗಿತಗೊಳಿಸುವಂತೆ ಟ್ಯಾಕ್ಸಿ, ಕ್ಯಾಬ್ ಚಾಲಕರಿಂದ ಪ್ರತಿಭಟನೆ

Prasthutha|

- Advertisement -

ಬೆಂಗಳೂರು: ರಾಪಿಡೋ ಬೈಕ್ ಟ್ಯಾಕ್ಸಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಟ್ಯಾಕ್ಸಿ, ಕ್ಯಾಬ್ ಚಾಲಕರು ಸಾರಿಗೆ ಸಚಿವ ಶ್ರೀರಾಮುಲು ಮನೆ ಎದುರು ಧರಣಿ ನಡೆಸಿದರು.

ನಗರದಲ್ಲಿಂದು ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್ ನಲ್ಲಿರುವ ಶ್ರೀರಾಮುಲು ನಿವಾಸದ ಮುಂಭಾಗ ಭಾರತ್ ಟ್ರಾನ್ಸ್ ಪೋರ್ಟ್ ಅಸೋಸಿಯೇಶನ್ ನೇತೃತ್ವದಲ್ಲಿ ಜಮಾಯಿಸಿದ ಕ್ಯಾಬ್ ಚಾಲಕರು, ನೂರಾರು ಕ್ಯಾಬ್ ನಿಲ್ಲಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

- Advertisement -

ರಾಪಿಡೋ ಬೈಕ್ ಟ್ಯಾಕ್ಸಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸ್ಕೀಮ್ ಕೂಡಲೇ ಹಿಂಪಡೆಯಬೇಕು ಸೇರಿದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ ಮಾಡಿದರು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಟ್ಯಾಕ್ಸಿ ಚಾಲಕ ಜಯಣ್ಣ, ಸಚಿವರು ನಮ್ಮ ಸಮಸ್ಯೆ ಆಲಿಸಿದ್ದಾರೆ. ಅಲ್ಲದೆ, ಜೂಮ್ ಕಾರು ಕೂಡ ಈಗ ಕಾದು ಮುಚ್ಚಿ ಆ್ಯಪ್ ಯೂಸ್ ಮಾಡುವ ಕೆಲಸ ಮಾಡಿಕೊಂಡಿದ್ದಾರೆ. ಇದರಿಂದ ಸಮಸ್ಯೆಯಾಗುತ್ತಿದೆ ಎಂದರು.

ಟ್ಯಾಕ್ಸಿ ಓಡಿಸಿದರೆ ಒಂದು ನಯಾ ಪೈಸೆ ಹಣ ಬರೋದಿಲ್ಲ. ಸೋಮವಾರ ಸಭೆ ಕರೆದಿದ್ದಾರೆ. ನಮ್ಮ ಸಮಸ್ಯೆ ಬಗೆಹಾರಿಸುವುದಾಗಿ ಹೇಳಿದ್ದಾರೆ.ಇಲ್ಲದಿದ್ದರೆ, ಹೋರಾಟ ಮುಂದುವರೆಸಲಾಗುವುದು ಎಂದು ತಿಳಿಸಿದರು.

ವಕೀಲ ಅಮೃತೇಶ್ ಮಾತನಾಡಿ, ಟ್ಯಾಕ್ಸಿ ಚಾಲಕರಿಗೆ ಅನ್ಯಾಯವಾಗಿದೆ. ವೈಟ್ ಬೋರ್ಡ್ ರ ಹಾವಳಿ ಹೆಚ್ಚಾಗಿದೆ. ಪೊಲೀಸ್ ಇಲಾಖೆಯವರು ಕಣ್ಣುಮುಚ್ಚಿ ಕುಳಿತ್ತಿದ್ದಾರೆ ಎಂದು ಟೀಕಿಸಿದರು.

ಇನ್ನೂ, ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಕ್ಯಾಬ್ ಗಳನ್ನು ತೆರವು ಮಾಡುವಂತೆ ಮನವಿ ಮಾಡಿದರು. ಆದರೆ ಸಚಿವ ಶ್ರೀ ರಾಮುಲು ಬಂದು ನಮ್ಮ ಬೇಡಿಕೆಗಳನ್ನು ಈಡೇರಿಸುವ ವರೆಗೂ ಇಲ್ಲಿಂದ ಕ್ಯಾಬ್ ತೆಗೆಯುವುದಿಲ್ಲ ಎಂದು ಕ್ಯಾಬ್ ಚಾಲಕರು ಪಟ್ಟು ಹಿಡಿದ ಪ್ರಸಂಗ ಜರುಗಿತು.



Join Whatsapp