ನವದೆಹಲಿ, ಜುಲೈ 22: ತೆರಿಗೆ ವಂಚನೆಯ ಆರೋಪದಲ್ಲಿ ಮಾಧ್ಯಮ ಗ್ರೂಪ್ ದೈನಿಕ್ ಭಾಸ್ಕರ್ ಮತ್ತು ಉತ್ತರ ಪ್ರದೇಶ ಮೂಲದ ಸುದ್ದಿ ವಾಹಿನಿಯ ಚಾನೆಲ್ ಕಚೇರಿಯ ಮೇಲೆ ಇಂದು ಬೆಳಿಗ್ಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ದೈನಿಕ್ ಭಾಸ್ಕರ್ ಸಂಸ್ಥೆಗೆ ಸೇರಿದ ನಿವಾಸ ಮತ್ತು ಕಚೇರಿಗಳ ಮೇಲೆ ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದ 30 ಕ್ಕೂ ಮಿಕ್ಕಿದ ಸ್ಥಳಗಳಲ್ಲಿ ಏಕಕಾಲದಲ್ಲಿ ಸರಿಸುಮಾರು 100 ಮಂದಿ ಅದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಕುರಿತು ದೈನಿಕ್ ಭಾಸ್ಕರ್ ನ ಜೈಪುರ, ಅಹಮದಾಬಾದ್, ಭೋಪಾಲ್ ಮತ್ತು ಇಂದೋರ್ ಕಚೇರಿಗಳಲ್ಲಿ ದಾಳಿ ನಡೆಯುತ್ತಿದೆ ಎಂದು ಹಿರಿಯ ಸಂಪಾದಕ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಾತ್ರವಲ್ಲದೇ ಆದಾಯ ತೆರಿಗೆ ಅಧಿಕಾರಿಗಳ ತಂಡವು ಉತ್ತರ ಪ್ರದೇಶದ ಟೆಲಿವಿಷನ್ ಚಾನೆಲ್, ಭಾರತ್ ಸಮಾಚಾರ್ ಸೇರಿದ್ದ ಲಕ್ನೋ ಕಚೇರಿಗೆ ದಾಳಿ ನಡೆಸಿದರಲ್ಲದೇ ದಾಖಲೆಗಳನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಸಂಪಾದಕರ ಮನೆ ಮೇಲೆ ದಾಳಿ ಮಾಡಿದೆ.
ಚಾನೆಲ್ ನ ತೆರಿಗೆಯ ವಂಚನೆಯ ಸಾಕ್ಷ್ಯವನ್ನು ಆಧರಿಸಿ ಐಟಿಯಿಂದ ಈ ದಾಳಿ ನಡೆಸಲಾಗಿದೆಯೆಂದು ಹೇಳಲಾಗುತ್ತಿದ್ದರೂ, ಯುಪಿ ಸರ್ಕಾರದ ಜನವಿರೋಧಿ ನೀತಿ ಮತ್ತು ವೈಫಲ್ಯವನ್ನು ತಮ್ಮ ಚಾನೆಲ್ ನಲ್ಲಿ ವರದಿ ಮಾಡಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆಯೆಂದು ಭಾರತ್ ಸಮಾಚಾರ್ ಆರೋಪಿಸಿದೆ.
ಮಾತ್ರವಲ್ಲದೇ ಕೋವಿಡ್ ನಿರ್ವಹಣೆಯಲ್ಲಿ ಯುಪಿ ಸರ್ಕಾರದ ವೈಫಲ್ಯವನ್ನು ಜನತೆಯ ಮುಂದಿರಿಸಿದ್ದ ಕಾರಣಕ್ಕಾಗಿ ಈ ದಾಳಿ ನಡೆದಿದೆಯೆಂದು ಪ್ರತಿಪಕ್ಷಗಳು ಗಂಭೀರವಾಗಿ ಆರೋಪಿಸಿವೆ.
ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯವರು ಇದು ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕ್ರೂರ ಪ್ರಯತ್ನವೆಂದು ಬಣ್ಣಿಸಿದ್ದಾರೆ.
ಕೋವಿಡ್ 19 ಸಾಂಕ್ರಾಮಿಕ ರೋಗದ ನಿರ್ವಹಣೆಯಲ್ಲಿ ಮೋದಿ ಸರ್ಕಾರವನ್ನು ಟೀಕಿಸಿ ವರದಿ ಮಾಡಿದ ಹಿನ್ನೆಲೆಯಲ್ಲಿ ದೈನಿಕ್ ಭಾಸ್ಕರ್ ಮಾಧ್ಯಮ್ ಗ್ರೂಪ್ ಇದೀಗ ಬೆಲೆತೆತ್ತಿದೆ ಮತ್ತು ದೇಶದಲ್ಲೀಗ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆಯೆಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮೂಲಕ ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇದನ್ನು ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕುವ ಒಂದು ಲಜ್ಜೆಗೆಟ್ಟ ಪ್ರಯತ್ನ ಎಂದು ಕರೆದಿದ್ದಾರೆ.
ದೇಶದ ಅತಿದೊಡ್ಡ ವೃತ್ತಪತ್ರಿಕೆ ಗುಂಪುಗಳಲ್ಲಿ ಒಂದಾದ ದೈನಿಕ್ ಭಾಸ್ಕರ್ ಅವರು ಏಪ್ರಿಲ್-ಮೇ ತಿಂಗಳಲ್ಲಿ ಕೋವಿಡ್ನ ಎರಡನೇ ತರಂಗದಲ್ಲಿ ಸಂಭವಿಸಿದ ವಿನಾಶದ ಪ್ರಮಾಣವನ್ನು ವರದಿ ಮಾಡುವಲ್ಲಿ ಮುಂಚೂಣಿಯಲ್ಲಿತ್ತು.
ದೇಶದಲ್ಲಿ ಉಲ್ಬಣಗೊಂಡ ಸಾಂಕ್ರಾಮಿಕ ಸೋಂಕು ನಿರ್ವಹಣೆಯನ್ನು ವಿಮರ್ಶಿಸಿದ್ದ ದೈನಿಕ್ ಭಾಸ್ಕರ್ ತನ್ನ ವರದಿಯನ್ನು ಪ್ರಕಟಿಸಿ ಆಕ್ಸಿಜನ್, ಬೆಡ್, ಲಸಿಕೆಗಳ ಕೊರತೆಯಲ್ಲಿ ಸರ್ಕಾರದ ವೈಫಲ್ಯನ್ನು ವರದಿ ಮಾಡಿತ್ತು.
ಕೋವಿಡ್ ಸಂತ್ರಸ್ತರ ಶವಗಳು ಉತ್ತರಪ್ರದೇಶ ಮತ್ತು ಬಿಹಾರದ ಗಂಗಾನದಿ ತೀರದಲ್ಲಿ ತೇಲುತ್ತಿರುವ ಭೀಕರ ದೃಶ್ಯಾವಳಿಯನ್ನು ದೈನಿಕ್ ಭಾಸ್ಕರ್ ವರದಿ ಬಹಿರಂಗಪಡಿಸಿತ್ತು. ಈ ಶವಗಳ ಅಂತ್ಯಕ್ರಿಯೆ ನಡೆಸುವುದರ ಕೊರತೆಯೆದ್ದು ಕಾಣುತಿತ್ತು.