ಬೆಂಗಳೂರು: ಉದ್ಯಮಿಗಳು, ಬಿಲ್ಡರ್ ಗಳು, ವ್ಯಾಪಾರಿಗಳು ಸೇರಿ ಆದಾಯ ತೆರಿಗೆ ವಂಚನೆ ನಡೆಸುವವರ ವಿರುದ್ಧದ ದಾಳಿಯನ್ನು ಮುಂದುವರೆಸಿರುವ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 50ಕ್ಕೂ ಹೆಚ್ಚು ಕಡೆಗಳಲ್ಲಿ ದಿಢೀರ್ ಬೃಹತ್ ದಾಳಿ ನಡೆಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 50ಕ್ಕೂ ಕಡೆಗಳಲ್ಲಿ ಇಂದು ಮುಂಜಾನೆಯಿಂದಲೇ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಅಪಾರ ಪ್ರಮಾಣದ ದಾಖಲೆ ಪತ್ರಗಳನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಿದ್ದಾರೆ. ಆದಾಯ ತೆರಿಗೆ ಇಲಾಖೆಯ 600ಕ್ಕೂ ಹೆಚ್ಚು ಅಧಿಕಾರಿಗಳ ತಂಡವು ಏಕಕಾಲದಲ್ಲಿ 50ಕ್ಕೂ ಹೆಚ್ಚು ಕಡೆಗಳಲ್ಲಿ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಆಸ್ತಿ ಪಾಸ್ತಿಗಳು ಮನೆಯಲ್ಲಿನ ಐಷಾರಾಮಿ ವಸ್ತುಗಳು ಚಿನ್ನ ಬೆಳ್ಳಿ ಆಭರಣಗಳ ಮಾಹಿತಿಯನ್ನು ಪಡೆದುಕೊಳ್ಳತೊಡಗಿದ್ದಾರೆ.
ಹಲವು ದಿನಗಳ ಪೂರ್ವ ಸಿದ್ದತೆಯ ಜೊತೆ ಸರ್ಚ್ ವಾರೆಂಟ್ ತಂದು ಉದ್ಯಮಿಗಳು, ವ್ಯಾಪಾರಿಗಳು ಸೇರಿ ಆದಾಯ ತೆರಿಗೆ ವಂಚನೆಯ ಇತರರ ಮನೆ ಹಾಗೂ ಕಚೇರಿಗಳನ್ನು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದಾಯ ಮರೆಮಾಚಿ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದ್ದು, ಐಟಿ ರಿಟರ್ನ್ಸ್ ಸಲ್ಲಿಕೆಗಿಂತ ಹೆಚ್ಚಿನ ಆದಾಯ ಹೊಂದಿರುವುದು ದಾಳಿಯ ವೇಳೆ ಪತ್ತೆ ಮಾಡಲಾಗಿದೆ.
ಗೋವಾ – ಕರ್ನಾಟಕದ ಸುಮಾರು 600 ಮಂದಿ ಅಧಿಕಾರಿಗಳ ತಂಡ ದಾಳಿಯಲ್ಲಿ ಭಾಗಿಯಾಗಿದ್ದು, ಲೆಕ್ಕಪತ್ರಗಳ ಶೋಧನೆ ನಡೆಸುತ್ತಿದ್ದು, ಸದಾಶಿವನಗರದ ಎಂಬೆಸ್ಸಿ ಆರ್ಕೆಡ್ ಅಪಾರ್ಟ್ಮೆಂಟ್ ನ ನರಪತ್ ಸಿಂಗ್ ಚರೋಡಿಯ ಎಂಬುವರ ನಂಬರ್ 607ರ ಫ್ಲ್ಯಾಟ್ ಮೇಲೆ ದಾಳಿ ನಡೆಸಲಾಗಿದೆ. ನಾಲ್ವರು ಅಧಿಕಾರಿಗಳ ತಂಡ ಮನೆಯಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಗರದಲ್ಲಿ ಆದಾಯ ತೆರಿಗೆ ವಂಚಿತ ಉದ್ಯಮಿಗಳು ವ್ಯಾಪಾರಿಗಳು ಸೇರಿ 37 ಕಡೆ ಐಟಿ ದಾಳಿ ನಡೆಸಿ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು ದಾಳಿಯು ಮುಂದುವರೆದಿರುವುದರಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಕಳೆದ ಮಾರ್ಚ್ 22ರಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮುಂಬೈ, ಥಾಣೆ ಸೇರಿದಂತೆ ದೇಶದ ಹಲವೆಡೆ ದಾಳಿ ನಡೆಸಿದ ಬಳಿಕ ನಡೆದ ಬೃಹತ್ ದಾಳಿ ಇದಾಗಿದೆ.
ಮಾರ್ಚ್ 22ರಂದು ಹಿರಾನಂದನಿ ಗ್ರೂಪ್ಗೆ ಸಂಬಂಧಿಸಿದಂತೆ ಚೆನ್ನೈ, ಬೆಂಗಳೂರು ಮತ್ತು ಮುಂಬೈನ 24 ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ. ವಿದೇಶಿ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಾನಂದನಿ ಗ್ರೂಪ್ ಮೇಲೆ ದಾಳಿ ನಡೆಸಲಾಗಿತ್ತು. ಗ್ರೂಪ್ನ ಸಂಸ್ಥಾಪಕ ಸಹೋದರರಾದ ನಿರಂಜನ್ ಮತ್ತು ಸುರೇಂದ್ರ ಅವರು ಟ್ರಸ್ಟ್ ನಲ್ಲಿ ಬಹಿರಂಗಪಡಿಸದ ವಿದೇಶಿ ಹೂಡಿಕೆಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ. ಇದಷ್ಟೇ ಅಲ್ಲದೆ ಅನೇಕ ದೊಡ್ಡ ಬಿಲ್ಡರ್ ಗಳ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿತ್ತು..