ಬೆಂಗಳೂರು, ಜು.28: ಬಸವರಾಜ ಬೊಮ್ಮಾಯಿ ನೇತೃತ್ವದ ನೂತನ ಸರಕಾರ ಹಿಂದುತ್ವದ ಪರವಾಗಿ ಇರಬೇಕು. ಭ್ರಷ್ಟಾಚಾರ ಮುಕ್ತವಾದ ಆಡಳಿತ ಕೊಡಬೇಕು. ಇದು ನಮ್ಮ ಉದ್ದೇಶ. ಕೆಲವು ನಿರೀಕ್ಷೆಗಳು ಬದಲಾವಣೆಯಾಗಿವೆ. ಕಾಲ ಕಾಲಕ್ಕೆ ಇನ್ನು ಬದಲಾವಣೆಯಾಗಲಿವೆ. ಅದನ್ನು ನೀವೇ ಕಾದು ನೋಡಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ವರಿಷ್ಠರು ಸಂಪುಟ ಸೇರಲು ಹೇಳಿದರೆ ಸಚಿವನಾಗಲು ಸಿದ್ಧ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಂತ್ರಿ ಸ್ಥಾನಕ್ಕಾಗಿ ಲಾಬಿ ನಡೆಸುವ ವ್ಯಕ್ತಿಯಲ್ಲ ನಾನು. ಆದರೆ ಸಚಿವನಾಗುವಂತೆ ವರಿಷ್ಠರು ಸೂಚಿಸಿದರೆ ಆ ಸ್ಥಾನ ವಹಿಸಲು ಸಿದ್ಧ ಎಂದು ಹೇಳಿದರು.
ಮಂತ್ರಿ ಸ್ಥಾನಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ. ನನ್ನಲ್ಲಿನ ಸಂಘಟನೆಯ ಸಾಮರ್ಥ್ಯ, ಪ್ರಾಮಾಣಿಕತೆಯನ್ನು ಗುರುತಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಕೇಂದ್ರ ಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ್ದರು. ಈಗ ಅದಕ್ಕಾಗಿ ಕೈ ಕಾಲು ಹಿಡಿಯುವ ಹಂತಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬೊಮ್ಮಾಯಿ ಅವರು ಯಾರ ಹಂಗಿಲ್ಲದೆ ಆಡಳಿತ ನಡೆಸಲಿದ್ದಾರೆ. ಇನ್ನೊಬ್ಬರ ಕೈಗೊಂಬೆ ಎಂಬಂತಹ ಊಹಾಪೋಹ ಬೇಡ. ಭ್ರಷ್ಟಾಚಾರ ರಹಿತ ಆಡಳಿತವನ್ನು ಕೊಟ್ಟೇ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.