‘ಸಕಾಲ ಸೇವೆ’ ಯೋಜನೆಯಲ್ಲಿ ‘ತತ್ಕಾಲ್ ಸೇವೆ’ ತರಲು ಚಿಂತನೆ: ಸಚಿವ ಬಿ.ಸಿ. ನಾಗೇಶ್

Prasthutha|

►► ಸಕಾಲ ನವೀಕೃತ ವೆಬ್­ಸೈಟ್ ಲೋಕಾರ್ಪಣೆ

- Advertisement -

ಬೆಂಗಳೂರು: ಕಾಲಮಿತಿಯಲ್ಲಿ ಸರ್ಕಾರಿ ಸೇವೆಗಳನ್ನು ನೀಡುವ ಭರವಸೆ ನೀಡುವ ‘ಸಕಾಲ ಸೇವೆ’ ಯೋಜನೆಯಲ್ಲಿ ‘ತತ್ಕಾಲ್ ಸೇವೆ’ಯನ್ನು ತರುವ ಚಿಂತನೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ. ನಾಗೇಶ್ ಹೇಳಿದರು.

ಸಕಾಲ ಸೇವೆ ಆರಂಭವಾಗಿ ಏಪ್ರಿಲ್ 2ಕ್ಕೆ 10 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ (ಏ.4) ಆಯೋಜಿಸಲಾಗಿದ್ದ ‘ಸಕಾಲ ದಶಮಾನೋತ್ಸವ’ ಕಾರ್ಯಕ್ರಮದಲ್ಲಿ ನವೀಕೃತ ಸಕಾಲ ವೆಬ್­ಸೈಟ್­ನ್ನು ಲೋಕಾರ್ಪಣೆಗೊಳಿಸಿ ಸಚಿವರು ಮಾತನಾಡಿದರು.

- Advertisement -

ರಾಜ್ಯ ಸರ್ಕಾರದ 99 ಇಲಾಖೆಗಳ 1,115 ಸೇವೆಗಳು ಸಕಾಲ ಸೇವೆಯಲ್ಲಿ ಲಭ್ಯ ಇವೆ. ವಿವಿಧ ಇಲಾಖೆಗಳ ಒಂದೊಂದು ಸೇವೆಗೆ ಒಂದೊಂದು ಕಾಲ ಮಿತಿ ನಿಗದಿಪಡಿಸಲಾಗಿದೆ. ಸಕಾಲ ಯೋಜನೆ ಕಾರಣ ಅರ್ಜಿಗಳು ಕಾಲಮಿತಿಯಲ್ಲಿ ವಿಲೇವಾರಿ ಆಗುತ್ತಿವೆ. ಆದರೆ, ಕೆಲವು ಸಂದರ್ಭಗಳಲ್ಲಿ ಅರ್ಜಿದಾರರಿಗೆ ತುರ್ತಾಗಿ ಒಂದೆರೆಡು ದಿನಗಳಲ್ಲಿ ದಾಖಲೆಗಳು, ಪ್ರಮಾಣಪತ್ರಗಳು ಬೇಕಾಗುತ್ತವೆ. ಅಂತಹ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಸೇವೆ ಒದಗಿಸಲು ತತ್ಕಾಲ್ ಸೇವೆಯನ್ನು ಜಾರಿಗೆ ತರುವ ಚಿಂತನೆ ಇದೆ. ಈ ಕುರಿತು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದು’ ಎಂದು ಸಚಿವ ನಾಗೇಶ್ ಅವರು ಹೇಳಿದರು.

‘2012ರ ಏಪ್ರಿಲ್ 2ರಿಂದ ಈ ವರ್ಷದ ಫೆಬ್ರವರಿ 28ರವರೆಗೆ 26.56 ಕೋಟಿ ಅರ್ಜಿಗಳು ಸ್ವೀಕೃತವಾಗಿದ್ದು, 26.41 ಕೋಟಿ ಅರ್ಜಿಗಳು ವಿಲೇವಾರಿಗೊಂಡಿವೆ. ಸಕಾಲ ಸೇವೆಯಡಿ ಕಾಲಮಿತಿಯಲ್ಲಿ ಸೇವೆ ಒದಗಿಸದ ಅಧಿಕಾರಿ ಅಥವಾ ಸಿಬ್ಬಂದಿಗೆ ದಂಡ ವಿಧಿಸಲು ಅವಕಾಶ ಇದೆ. ಆದರೆ, ಅದು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಈ ವಿಚಾರದಲ್ಲಿ ಅಧಿಕಾರಿಗಳು ಗಮನ ಹರಿಸಬೇಕಿದೆ’ ಎಂದು ಸಚಿವ ನಾಗೇಶ್ ನುಡಿದರು.

‘ಚಿಕ್ಕಮಗಳೂರಿನಲ್ಲಿ ಕೋವಿಡ್ ಕಾರಣ ಪತಿಯನ್ನು ಕಳೆದುಕೊಂಡ ಮಹಿಳೆಗೆ ಅನುಕಂಪದ ಆಧಾರದ ಮೇಲೆ ನೌಕರಿಯನ್ನು ನೀಡಲಾಗಿತ್ತು. ಆ ಮಹಿಳೆ ಕೆಲಸ ಮಾಡುತ್ತಿದ್ದರು. ಆದರೆ, 11 ತಿಂಗಳಿಂದ ವೇತನ ನೀಡಿರಲಿಲ್ಲ. ಚಿಕ್ಕಮಗಳೂರು ಪ್ರವಾಸದ ವೇಳೆ ಕಚೇರಿಯೊಂದರ ಆವರಣದಲ್ಲಿ ನಿಂತಿದ್ದ ಆ ಮಹಿಳೆಯನ್ನು ಮಾತನಾಡಿಸಿದಾಗ ವೇತನ ವಿಚಾರ ತಿಳಿಸಿದರು. ವೇತನ ನೀಡದಿರಲು ಕಾರಣವೇನು ಎಂದು ಅರಿಯಲು ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದಾಗ ಸಕಾರಣವಿಲ್ಲದೇ ಬೇರೆ ಬೇರೆ ಕಚೇರಿಗಳಲ್ಲಿ ತಿಂಗಳುಗಟ್ಟಲೇ ಸಂಬಂಧಿಸಿದ ಕಡತ ಇಟ್ಟುಕೊಂಡಿರುವುದು ಕಂಡು ಬಂತು. ಕೂಡಲೇ ವೇತನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದೆ. ಕೇವಲ ಒಂದೇ ದಿನದಲ್ಲಿ ಕೆಲಸ ಆಯಿತು. ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ ತಾವು ಮಾಡಬೇಕಾದ ಕೆಲಸ ಮಾಡಿದ್ದರೆ ಆ ಮಹಿಳೆ 11 ತಿಂಗಳು ಕಾಲ ವೇತನಕ್ಕಾಗಿ ಕಾಯುವ ಪರಿಸ್ಥಿತಿ ಬರುತ್ತಿರಲಿಲ್ಲ. ಇಂತಹ ಘಟನೆಗಳು ಮರಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಮೇಲಿದೆ. ಅನಗತ್ಯ ವಿಳಂಬ ಮಾಡಬಾರದು’ ಎಂದು ಸಚಿವ ನಾಗೇಶ್ ಹೇಳಿದರು.

‘ಸರ್ಕಾರಿ ಉದ್ಯೋಗ ಪಡೆದ ಬಳಿಕ ಸೇವಕರಾಗಿ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಸರ್ಕಾರಿ ಸೇವೆಗಳನ್ನು ಒದಗಿಸುವುದರಲ್ಲಿ ಪಾರದರ್ಶಕತೆ, ಬದ್ಧತೆ ಮತ್ತು ಜವಾಬ್ದಾರಿ ಇರಬೇಕು. ಕಾಲಮಿತಿಯಲ್ಲಿ ಸೇವೆ ಒದಗಿಸಬೇಕು. ಇಲ್ಲದಿದ್ದರೆ ಅದಕ್ಕೆ ಕಾರಣವನ್ನು ತಿಳಿಸುವ ವ್ಯವಸ್ಥೆಯು ಜಾರಿಗೆ ತರಬೇಕು ಎನ್ನುವ ಉದ್ದೇಶವಿದೆ. ಮುಂದಿನ ದಿನಗಳಲ್ಲಿ ಅದನ್ನು ಜಾರಿಗೆ ತರುವ ಬಗ್ಗೆಯು ಚರ್ಚಿಸಲಾಗುವುದು’ ಎಂದು ಸಚಿವ ನಾಗೇಶ್ ಹೇಳಿದರು.

ಕಾರ್ಯಕ್ರಮದಲ್ಲಿ ಸಕಾಲ ಸೇವೆಗಳ ಕುರಿತು ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸಕಾಲ ಸೇವೆಗಳ ಜಾರಿಯಲ್ಲಿ ಉತ್ತಮ ಸಾಧನೆ ಮಾಡಿ ಮೊದಲ ಮೂರು ಸ್ಥಾನಗಳಲ್ಲಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಅಧಿಕಾರಿಗಳಿಗೆ ಪ್ರಶಂಸನಾ ಪತ್ರಗಳನ್ನು ವಿತರಿಸಲಾಯಿತು. ಸಕಾಲ ಯೋಜನೆ ಅನುಷ್ಠಾನಗೊಳಿಸಲು ಶ್ರಮಿಸಿದ ಅಧಿಕಾರಿಗಳಿಗೆ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಸುರೇಶ್ ಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಕಾಲ ಮಿಷನ್ ನಿರ್ದೇಶಕರಾದ ಪೊನ್ನುರಾಜ್, ಹೆಚ್ಚುವರಿ ನಿರ್ದೇಶಕರಾದ ಡಾ. ಬಿ.ಆರ್ ಮಮತಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.



Join Whatsapp