ಮುಂಬೈ: ಬ್ಯಾಟರಿ ಸ್ಫೋಟದಿಂದಾಗಿ ಭಾರತದಲ್ಲಿ ಹಲವಾರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾದ ಪ್ರಕರಣಗಳ ಬಳಿಕ ಮೊದಲ ಬಾರಿಗೆ ಎಲೆಕ್ಟ್ರಿಕ್ ಕಾರು ಹೊತ್ತಿ ಉರಿದಿದೆ. ರಸ್ತೆ ಮಧ್ಯೆಯೇ ಟಾಟಾ ನೆಕ್ಸಾನ್ ಇವಿ ಕಾರು ಹೊತ್ತಿ ಉರಿಯುತ್ತಿರುವ ವೀಡಿಯೋ ವೈರಲ್ ಆಗಿದೆ. ಬುಧವಾರ ತಡರಾತ್ರಿ ಮುಂಬೈನ ವಸೈ ವೆಸ್ಟ್ ಬಳಿ ನೆಕ್ಸಾನ್ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ.
ಕಾರು ಬೆಂಕಿಗಾಹುತಿಯಾದುದರ ಬಗ್ಗೆ ಪ್ರತಿಕ್ರಿಯಿಸಿರುವ ಟಾಟಾ ಸಂಸ್ಥೆ, ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿದೆ ಎಂದಿದ್ಧಾರೆ. ನಾಲ್ಕು ವರ್ಷಗಳಲ್ಲಿ 30,000ಕ್ಕೂ ಹೆಚ್ಚು ಇವಿಗಳು ಒಟ್ಟು 1 ಮಿಲಿಯನ್ ಕಿ.ಮೀ. ದೇಶಾದ್ಯಂತ ಕ್ರಮಿಸಿದ ಬಳಿಕ ಮೊದಲ ಬಾರಿ ಈ ಪ್ರಕರಣ ವರದಿಯಾಗಿದೆ. ಈ ಬಗ್ಗೆ ತನಿಖೆ ನಡೆಸಿದ ನಂತರವಷ್ಟೇ ಪ್ರತಿಕ್ರಿಯೆ ನೀಡುತ್ತೇವೆ. ನಮ್ಮ ವಾಹನಗಳು ಮತ್ತು ಅವುಗಳ ಬಳಕೆದಾರರ ಸುರಕ್ಷತೆಗೆ ನಾವು ಬದ್ಧರಾಗಿದ್ದೇವೆ ಎಂದು ಟಾಟಾ ಸಂಸ್ಥೆ ಹೇಳಿದೆ.
ಕಾರು ಮಾಲೀಕ ತನ್ನ ಕಾರನ್ನು ಕಚೇರಿಯಲ್ಲಿ ಚಾರ್ಜ್ ಮಾಡಿದ ಬಳಿಕ 5 ಕಿ.ಮೀ. ಕ್ರಮಿಸಿದ್ದಾರೆ. ಬಳಿಕ ಕಾರಿನಲ್ಲಿ ಶಬ್ದ ಕೇಳಿ ಬಂದಿದೆ. ಡ್ಯಾಶ್ ಬೋರ್ಡಿಂದ “ವಾಹನವನ್ನು ನಿಲ್ಲಿಸಿ ಕಾರಿನಿಂದ ಇಳಿಯಿರಿ ಎಂದು ಸಂದೇಶ ಬಂದಿದ್ದು, ತಕ್ಷಣವೇ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ” ಎಂದು ಮಾಲೀಕ ಘಟನೆಯ ಕುರಿತು ಪ್ರತಿಕ್ರಿಯಿಸಿದ್ದಾರೆ.