RSS ಹತ್ತಿರ ಸುಳಿಯದ ED,NIAಗಳು PFIಅನ್ನು ಗುರಿಯಾಗಿಸುವುದು ಶೋಷಿತರ ಧ್ವನಿಯನ್ನು ಅಡಗಿಸುವ ಕುತಂತ್ರವಾಗಿದೆ: ಭಾಸ್ಕರ್ ಪ್ರಸಾದ್

Prasthutha|

ಬೆಂಗಳೂರು: ಆರ್.ಎಸ್.ಎಸ್ ಬಾಗಿಲಿಗೆ ಬಾರದ ಇ.ಡಿ, ಎನ್.ಐ.ಎಗಳು ಪಿ.ಎಫ್.ಐ ಸಂಘಟನೆಯನ್ನು ಮಾತ್ರ ಗುರಿಯಾಗಿಸಿಕೊಂಡಿರುವುದು ಅಲ್ಪಸಂಖ್ಯಾತರು, ಶೋಷಿತರು ಮತ್ತು ದಮನಿತರ ಪರವಾದ ದೊಡ್ಡ ಶಕ್ತಿಯನ್ನು ಅಡಗಿಸುವ ಕುತಂತ್ರವಾಗಿದೆ. ವರ್ಷಗಳಿಂದ ಪ್ರಯತ್ನಪಟ್ಟರು ಇಲ್ಲಿಯವರೆಗೂ ಒಂದೇ ಒಂದು ಪ್ರಕರಣದಲ್ಲಿ ಕೂಡ ಎಸ್.ಡಿ.ಪಿ.ಐ ವಿರುದ್ಧ ಆಗಲಿ, ಪಿ.ಎಫ್.ಐ ವಿರುದ್ಧ ಆಗಲಿ ಒಂದೇ ಒಂದು ಆರೋಪ ಸಾಬೀತುಪಡಿಸಲು ಅವರಿಂದ ಸಾಧ್ಯವಾಗಿಲ್ಲ. ಆದರೂ ಈ ಸಂಘಟನೆಗಳ ವಿರುದ್ಧ ಜನರಲ್ಲಿ ದ್ವೇಷ ಭಾವನೆ ಮೂಡಿಸಲು ಕೋಮುವಾದಿ ಫ್ಯಾಸಿಸ್ಟ್ ಬಿಜೆಪಿ ಸರ್ಕಾರ ನಿರಂತರವಾಗಿ ಈ ರೀತಿಯ ದಾಳಿಗಳನ್ನು ಮಾಡುತ್ತಲೇ ಬರುತ್ತಿದೆ ಎಂದು ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಹೇಳಿದ್ದಾರೆ.

- Advertisement -

ನಗರದಲ್ಲಿ ಎಸ್.ಡಿ.ಪಿ.ಐ ರಾಜ್ಯ ಘಟಕ ಆಯೋಜಿಸಿದ  ಪತ್ರಿಕಾಗೋಷ್ಟಿಯಲ್ಲಿ  ಮಾತಾಡಿದ ಅವರು, ಈ ದೇಶದಲ್ಲಿ ಅತಿ ದೊಡ್ಡ ಅಪಾಯಕಾರಿ ಸಂಘಟನೆ ಎಂದರೆ ಅದು ಆರ್.ಎಸ್.ಎಸ್ ಮತ್ತು ಅದರ ಕೋಮು ದ್ವೇಷಿ ಹಿಂಸಾ ಕೃತ್ಯಗಳಲ್ಲಿ ಭಾಗಿಗಳಾಗಿರುವ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಶ್ರೀರಾಮ ಸೇನೆ, ಮುಂತಾದ ಸಂಘಟನೆಗಳು. ಆದರೆ ಅವುಗಳ ಮೇಲೆ ಎಂದೂ ಕೂಡ ಇ.ಡಿ, ಎನ್.ಐ.ಎ ದಾಳಿಗಳು ನಡೆಯುವುದಿಲ್ಲ ಆದರೆ ಯಾವುದೇ ಆರೋಪ ಸಾಬೀತಾಗದ ಪಿ.ಎಫ್.ಐ ಸಂಘಟನೆ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ಮಾಡುತ್ತಿವೆ ಎಂದು ಹೇಳಿದರು.

ಆರ್.ಎಸ್.ಎಸ್ ಸೇರಿದಂತೆ ಇತರೆ ಸಂಘ ಪರಿವಾರದ ಸಂಸ್ಥೆಗಳಲ್ಲಿ ಬಹುಮುಖ್ಯ ಸದಸ್ಯರಾಗಿದ್ದ ಯಶ್ವಂತ್ ಶಿಂಧೆ ಎನ್ನುವವರು ಆ ಸಂಘಟನೆಗಳಿಂದ ಹೊರಬಂದು, ಆ ಸಂಘಟನೆಗಳು ನಡೆಸುವ ಕೋಮುವಾದಿ ಕೃತ್ಯಗಳ ಬಗ್ಗೆ ಅವರೇ ಖುದ್ದಾಗಿ ಹೇಳಿದ್ದಾರೆ. ಅವರು ಕೇವಲ ಬಾಯಿ ಮಾತಿನಲ್ಲಿ ಆರೋಪ ಮಾಡುತ್ತಿಲ್ಲ ಬದಲಿಗೆ ಈ ಪ್ರಕರಣಗಳಲ್ಲಿ ತನ್ನನ್ನು ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಅವರು ಕೋರ್ಟಿಗೆ ಅಫಿಡಫಿಟ್ ಸಲ್ಲಿಸಿದ್ದಾರೆ. ಇದನ್ನು ನಾವು ಮೊದಲಿನಿಂದಲೂ ಹೇಳಿಕೊಂಡೆ ಬರುತ್ತಿದ್ದೆವು ಆದರೆ ಗೋದಿ ಮಾಧ್ಯಮಗಳು ಮತ್ತು ಫಾಸಿಸ್ಟ್, ಬ್ರಾಹ್ಮಣ್ಯದ ಸರ್ಕಾರಗಳು ಎಂದೂ ನಮ್ಮ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಈಗ ಬಾಸ್ಕರ್ ಆರೋಪಿಸಿದರು.

- Advertisement -

ಆರ್.ಎಸ್.ಎಸ್ ನ ಭಯೋತ್ಪಾದಕ ಕೃತ್ಯಗಳ  ಆರೋಪಗಳ ಮುಖ್ಯ ಅಂಶಗಳ ಪಟ್ಟಿಯನ್ನು ಎಸ್.ಡಿ.ಪಿ.ಐ ಬಿಡುಗಡೆ ಮಾಡಿದ್ದು ಅದರ ವರದಿಗಳು ಹೀಗಿವೆ.

1. 1999 – ಅತ್ಯಾಧುನಿಕ ಶಸ್ತ್ರಾಸ್ತ್ರಗಳ ತರಬೇತಿಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿತ್ತು. ಇದನ್ನು ಸೇನೆಯ ಅಧಿಕಾರಿಗಳೇ ಬಂದು ನಡೆಸಿಕೊಟ್ಟಿದ್ದರು.

2. 2003 – ಮಹಾರಾಷ್ಟ್ರದ ಪುಣೆ ಹತ್ತಿರದ ಅಜ್ಞಾತ ಸ್ಥಳದಲ್ಲಿ ಬಾಂಬ್ ಸ್ಪೋಟ ತರಬೇತಿಯನ್ನು 20 ಯುವಕರಿಗೆ ಒದಗಿಸಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ಇಬ್ಬರು ಮುಂದೆ ನಡೆದ ಮಾಲೆಗಾವ್ ಸ್ಪೋಟ ಪ್ರಕರಣದಲ್ಲಿ ಆರೋಪಿಗಳಾಗಿದ್ದರು.

3. ಇದೇ ಕಾರ್ಯಗಾರದಲ್ಲಿ ತರಬೇತಿ ಪಡೆದಂತಹ ಹಿಮಾಂಶು ಎಂಬವನು ಮೂರು ಕಡೆ ಬಾಂಬ್ ಸ್ಪೋಟಗಳನ್ನು ಮಾಡಿದ್ದಾನೆ. ನಂತರ ಔರಂಗಬಾದ್ ಬಾಂಬ್ ಸ್ಫೋಟದ ಸಂದರ್ಭದಲ್ಲಿ ಅವನು ಮೃತನಾಗುತ್ತಾನೆ ಮತ್ತು ಅವನ ಜೊತೆ ಕೋಂದೆವಾರ್ ಅನ್ನುವಂತಹ ಇನ್ನೊಬ್ಬ ಜೊತೆಗಾರನು ಕೂಡ ಸಾವಿಗೀಡಾಗುತ್ತಾನೆ.

ಈ ರೀತಿಯ ಗಂಭೀರ ಆರೋಪಗಳ ಜೊತೆಗೆ ತರಬೇತಿ ನೀಡಿದಂತಹ ವ್ಯಕ್ತಿಗಳ ವಿವರಗಳು ಮತ್ತು ಸಂಘಟನೆಗಳ ವಿವರಗಳು, ಯಾವ ಸಂಘಟನೆಗಳು ಯಾವ ಸ್ಥಳದಲ್ಲಿ ಈ ಕಾರ್ಯಾಚರಣೆಗಳ ಬಗ್ಗೆ ಸಭೆಗಳನ್ನು ಏರ್ಪಡಿಸಿತ್ತು. ಆ ರಹಸ್ಯ ಸಭೆಗಳಲ್ಲಿ ಯಾರೆಲ್ಲ ಪಾಲ್ಗೊಂಡಿದ್ದರು ಅನ್ನುವಂತಹ ಸಮಗ್ರ ಮಾಹಿತಿಯು ತನ್ನಲ್ಲಿ ಇರುವುದಾಗಿ ಯಶವಂತ್ ಶಿಂಧೆ ಹೇಳಿಕೊಂಡಿದ್ದಾರೆ. ಆದರೂ ಇ.ಡಿ, ಎನ್.ಐ.ಎ ಗಳು ಆರ್.ಎಸ್.ಎಸ್ ಮತ್ತು ಸಂಘ ಪರಿವಾರದ ಕಚೇರಿಗಳ ಮೇಲೆ, ವ್ಯಕ್ತಿಗಳ ಮೇಲೆ ದಾಳಿ ಮಾಡುವುದಿಲ್ಲ ಎಂದು ಟೀಕಿಸಿದರು.

ಅದಲ್ಲದೆ ಅಸೀಮಾನಂದ, ಕೊಡ್ನಾನಿ, ಬಾಬು ಭಜರಂಗಿ ಸೇರಿದಂತೆ ಸಾಕಷ್ಟು ಉಗ್ರರು ಸಂಘಪರಿವಾರದ ಭಯೋತ್ಪಾದಕ ಕೃತ್ಯಗಳ ಬಗ್ಗೆ ಆನ್ ಕ್ಯಾಮೆರಾ ಮಾತಾಡಿದ್ದಾರೆ. ಅಸೀಮಾನಂದ ಅಂತೂ ಈ ಕೃತ್ಯಗಳಲ್ಲಿ ಆರ್.ಎಸ್.ಎಸ್. ರಾಷ್ರ್ತಿಯ ಸಮಿತಿ ಸದಸ್ಯ ಇಂದ್ರೇಶ್ ಕುಮಾರ್ ನೇರ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾನೆ. ಆದರೂ ಎನ್.ಐ.ಎ ಈ ಬಗ್ಗೆ ಯಾವ ದಾಳಿ, ಬಂಧನವನ್ನೂ ಮಾಡುವುದಿಲ್ಲ ಎಂದು ಹೇಳಿದರು..

ದೇಶದ್ರೋಹಿ ಕೋಮುವಾದಿ ಸಂಘಟನೆಗಳು ಸಾಕಷ್ಟು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿವೆ ಅವುಗಳಲ್ಲಿ ಪಟ್ಟಿಯನ್ನೂ ಎಸ್ ಡಿ ಪಿಐ ಬಿಡುಗಡೆ ಮಾಡಿತು.

1. 2006 – ಮಾಲೆಗಾವ್ ಸ್ಪೋಟ.

2. 2006 – ಜಾಮ ಮಸ್ಜಿದ್ ಸ್ಪೋಟ.

3. 2007 – ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟ.

4. 2007 – ಅಜ್ಮೀರ್ ದರ್ಗಾ ಸ್ಫೋಟ.

ಇಷ್ಟೆಲ್ಲಾ ಭಯೋತ್ಪಾದಕ ಕೃತ್ಯಗಳಲ್ಲಿ ಈ ಸಂಘಟನೆಗಳು ಭಾಗಿಯಾಗಿದ್ದರೂ ಕೂಡ ಮತ್ತು ಅವುಗಳನ್ನು ಕಣ್ಣಾರೆ ಕಂಡಿದ್ದೇನೆ ಎಂದು ಸಾಕ್ಷಿಗಳನ್ನು ನುಡಿಯಲು ವ್ಯಕ್ತಿಗಳು ಸಿದ್ದರಿದ್ದಾಗಲೂ ಕೂಡ ಎನ್.ಐ.ಎ, ಆರ್.ಎಸ್.ಎಸ್ ಮತ್ತು ಅದರ ಅಂಗ ಸಂಸ್ಥೆಗಳ ಬಗ್ಗೆ ಸಣ್ಣ ತನಿಖೆಯನ್ನೂ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಇ.ಡಿ ವಿಚಾರಕ್ಕೆ ಬರುವುದಾದರೆ, ನೊಂದಣಿಯೇ ಆಗದ ಆರ್‌.ಎಸ್‌.ಎಸ್ ದೇಶಾದ್ಯಂತ ಕಾರ್ಯಕ್ರಮಗಳನ್ನು ಅಯೋಜಿಸುತ್ತದೆ. ಶಿಬಿರಗಳು ಕಾರ್ಯಾಗಾರಗಳನ್ನು ಅಯೋಜಿಸುತ್ತದೆ. ಅದಕ್ಕೆ ಹಣ ಎಲ್ಲಿಂದ ಬರುತ್ತೆ ಎಂಬ ಬಗ್ಗೆ ಎಂದೂ ಕೂಡ ಇ.ಡಿ ತನಿಖೆ ಮಾಡಿಲ್ಲ. ಆ ಹಣ ಎಲ್ಲಿಂದ ಬರುತ್ತದೆ? ನೋಂದಣಿಯಾಗದ ಆರ್.ಎಸ್.ಎಸ್ ಗೆ ಬ್ಯಾಂಕ್ ಅಕೌಂಟ್ ಇಲ್ಲ. ಹಣ ಬಂದರೆ ಎಲ್ಲವೂ ನಗದು ರೂಪದಲ್ಲಿ ಬರಬೇಕು. ಅದು ಕಪ್ಪು ಹಣವೇ? ಕೊಟ್ಟವರು ಯಾರು? ಎಂದು ಕೆಲವರು ದೂರು ನೀಡಿದರು ಕೂಡ ಇ.ಡಿ ತನಿಖೆ ಮಾಡುವುದಕ್ಕೆ ಮುಂದಾಗಲಿಲ್ಲ. ಇ.ಡಿ ಸಂಸ್ಥೆ ಈ ಫಾಸಿಸ್ಟರ ಕೈಗೊಂಬೆ ಎಂದು ತಿಳಿಯಲು ಇದಕ್ಕಿಂತ ಸಾಕ್ಷಿ ಬೇಕಾ?

ಕೋವಿಡ್ ಸಂದರ್ಭದಲ್ಲಿ ಪಿ.ಎಫ್.ಐ ಸುಮಾರು 7,146 ಅನಾಥ ಶವಗಳನ್ನು ಸಂಸ್ಕಾರ ಮಾಡಿತ್ತು. 2897 ಆಕ್ಸಿಜೆನ್ ಸಿಲಿಂಡರ್ ಗಳನ್ನು ಅವಶ್ಯಕತೆ ಇರುವವರಿಗೆ ಒದಗಿಸಿ ಕೊಟ್ಟಿತ್ತು. 2173 ಬೆಡ್ಗಳು, 2635 ಆಂಬುಲೆನ್ಸ್ ಸೇವೆಗಳನ್ನು ಕೂಡ ಒದಗಿಸಿಕೊಟ್ಟಿತ್ತು. ಸಾಮಾನ್ಯ ದಿನಗಳಲ್ಲಿ ವರ್ಷವಿಡೀ ಬಡವರಿಗೆ ಆಹಾರದ ಕಿಟ್ಟುಗಳು, ಊಟದ ಪ್ಯಾಕೆಟ್ ಗಳನ್ನು ಅವಶ್ಯಕತೆ, ಸಾಮರ್ಥ್ಯಕ್ಕೆ ಅನುಗುಣವಾಗಿ ಒದಗಿಸುತ್ತದೆ. ನೆರೆ ಸಂದರ್ಭದಲ್ಲಿ, ಮನೆ ಕುಸಿತ, ಗುಡ್ಡಗಳ ಕುಸಿತ ಆದಾಗ, ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡ ಜನರನ್ನು ರಕ್ಷಿಸುವ ಕಾರ್ಯದಲ್ಲಿ ಎಸ್ಡಿಪಿಐ ಮತ್ತು ಪಿ.ಎಫ್.ಐ ನಿರಂತರವಾಗಿ ಮುಂಚೂಣಿಯಲ್ಲಿರುತ್ತದೆ. ಆದರೆ ಇ.ಡಿ ಮತ್ತು ಎನ್.ಐ.ಎ ಗಳು ನಿಜವಾದ ಉಗ್ರವಾದಿಗಳನ್ನು ರಾಜಾರೋಷವಾಗಿ ಓಡಾಡಿಕೊಂಡಿರಲು ಬಿಟ್ಟು ಎಸ್ಡಿಪಿಐ ಮತ್ತು ಪಿ.ಎಫ್.ಐ ವಿರುದ್ಧ ಕೋಮುವಾದಿ ಸರ್ಕಾರದ ಅಣತಿಯಂತೆ ನಿರಂತರವಾಗಿ ದಾಳಿಗಳನ್ನು ಮಾಡುತ್ತಲೇ ಇರುತ್ತದೆ ಎಂದು ಹೇಳಿದರು.

ಇನ್ನು ಆರ್.ಎಸ್.ಎಸ್ ದೇಶಭಕ್ತಿಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ರಾಷ್ಟ್ರಧ್ವಜವನ್ನು ವಿರೋಧಿಸಿದ್ದ ಸಂಘಟನೆ ಅದು. ಸ್ವಾತಂತ್ರ್ಯ ಬಂದು 52 ವರ್ಷ ಕಳೆದರೂ ತನ್ನ ಕಚೇರಿ ಮತ್ತು ಕಾರ್ಯಕ್ರಮಗಳಲ್ಲಿ ಅದು ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ. ರಾಷ್ಟ್ರಗೀತೆಯನ್ನು ಕೂಡ ಅದು ವಿರೋಧಿಸಿತ್ತು. ಈ ಕೋಮುವಾದಿ ಸಂಘಟನೆ ಸಂವಿಧಾನವನ್ನು ಎಂದು ಅಂದೂ ಒಪ್ಪಿರಲಿಲ್ಲ. ಇಂದಿಗೂ ಒಪ್ಪುವುದಿಲ್ಲ. ಇಂಥವರು ಸಂವಿಧಾನದ ಉಳಿವಿಗಾಗಿ ಪ್ರಜಾಸತ್ತಾತ್ಮಕ ಹಾದಿಯಲ್ಲಿ ಹೋರಾಡುತ್ತಿರುವ ಎಸ್ಡಿಪಿಐ ಮತ್ತು  ಪಿ.ಎಫ್.ಐ ಗೆ ದೇಶಭಕ್ತಿಯ ಪಾಠ ಮಾಡಲು ಬರುತ್ತಾರೆ.

ಮೋದಿ ನೇತೃತ್ವದ ಫಾಸಿಸ್ಟ್ ಸರ್ಕಾರ ಆರ್.ಎಸ್.ಎಸ್ ನಂತಹ ನಿಜವಾದ ದೇಶದ್ರೋಹಿ ಸಂಘಟನೆಗಳ ಚಮಚಾಗಳ ರೀತಿ ವರ್ತಿಸುತ್ತಾ, ಸಮಾಜದಲ್ಲಿ ಕೋಮು ದ್ವೇಷ ಬಿತ್ತಲು ಮಾತ್ತು ತನ್ನ ರಾಜಕೀಯ ಪ್ರತಿಸ್ಪರ್ಧಿಗಳನ್ನು ಮಟ್ಟ ಹಾಕಲು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಇದು ಕಾಂಗ್ರೆಸ್ ಸೇರಿದಂತೆ ಎಲ್ಲ ವಿರೋಧಪಕ್ಷಗಳಿಗೂ ಗೊತ್ತು. ಏಕೆಂದರೆ ಅವರೂ ಕೂಡ ಅದೇ ದ್ವೇಷದ ದಾಳಿಗಳನ್ನು ಎದುರಿಸುತ್ತಿದ್ದಾರೆ. ಆದರೂ ರಾಜಕೀಯ ದ್ವೇಷದ ಕಾರಣಕ್ಕೆ ಎಸ್‌ಡಿಪಿಐ ಮತ್ತು ಪಿ.ಎಫ್.ಐ ಮೇಲಿನ ದಾಳಿಯ ವಿಚಾರವಾಗಿ ಫಾಸಿಸ್ಟರ ಪರವಾಗಿ ಈ ಪಕ್ಷಗಳು ನಿಂತಿವೆ. ನಾವು ನ್ಯಾಯಯುತ, ಪ್ರಜಾಸತ್ತಾತ್ಮಕ ಹಾದಿಯಲ್ಲಿ ಸಂವಿಧಾನದ ಆಶಯಗಳನ್ನು ರಕ್ಷಿಸಲು ಮತ್ತು ಅಲ್ಪಸಂಖ್ಯಾತ, ಶೋಷಿತ, ದಮನಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಿದ್ದೇವೆ. ಇದನ್ನು ಜನರು ಅರ್ಥ ಮಾಡಿಕೊಂಡು ಮುಂದಿನ ದಿನಗಳಲ್ಲಿ ಫಾಸಿಸ್ಟ್ ಕೋಮುವಾದಿ ಬಿಜೆಪಿ ಮತ್ತು ನಕಲಿ ಜಾತ್ಯತೀತ ಪಕ್ಷಗಳಿಗೆ ತಕ್ಕ ಪಾಠ ಕಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ  ರಾಜ್ಯ ಉಪಾಧ್ಯಕ್ಷರಾದ ದೇವನೂರ್ ಪುಟ್ಟನoಜಯ್ಯ, ರಾಜ್ಯ ಕಾರ್ಯದರ್ಶಿ ಆನಂದ್ ಮಿತ್ತಬೈಲ್ , ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಬಾಳೆಕಾಯಿ ಶ್ರೀನಿವಾಸ್, ಬೆಂಗಳೂರು ಜಿಲ್ಲಾ ಉಪಾಧ್ಯಕ್ಷರಾದ ರಮೇಶ್ ಕುಮಾರ್, ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಅಡ್ವೊಕೇಟ್ ವಿಜಯನ್  ಭಾಗವಹಿಸಿದ್ದರು.

Join Whatsapp