ಹೊಸದಿಲ್ಲಿ : ಸಾಮೂಹಿಕ ಹಿಂಸಾಚಾರವನ್ನು ಕಟ್ಟುನಿಟ್ಟಾಗಿ ತಡೆಯಲು ತಮಿಳುನಾಡಿನ ಮಾನವ ಹಕ್ಕುಗಳ ಸಂಘಟನೆ ಕಾನೂನು ರೂಪಿಸಬೇಕೆಂದು ಕರೆ ನೀಡಿದೆ. ರಾಜ್ಯದಲ್ಲಿ ಜಾತಿ ಆಧಾರಿತ ದೌರ್ಜನ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಘಟನೆಯು ಈ ಬೇಡಿಕೆ ಇಟ್ಟಿದೆ. ಕಳೆದ ಕೆಲವು ದಿನಗಳಿಂದ ತಂಜಾವೂರಿನಲ್ಲಿ ದಲಿತ ಯುವಕನ ಮೇಲೆ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿತ್ತು.
ದಲಿತ ಯುವಕನನ್ನು ಮರಕ್ಕೆ ಕಟ್ಟಿ ಅವಮಾನಿಸಿ ಗುಂಪೊಂದು ಕ್ರೂರವಾಗಿ ಹಲ್ಲೆ ಮಾಡಿತ್ತು. ತಂಜಾವೂರು ಮತ್ತು ಕಾವೇರಿ ಡೆಲ್ಟಾಗಳಲ್ಲಿ ಜಾತಿ ವಿರೋಧಿ ಗುಂಪು ದಾಳಿಗಳು ಹೆಚ್ಚುತ್ತಿವೆ ಎಂದು ಸಂಘಟನೆ ಹೇಳಿದೆ. ಊಳಿಗಮಾನ್ಯ ಪರಂಪರೆ ಪ್ರಾಬಲ್ಯ ಹೊಂದಿರುವ ತಂಜಾವೂರು ಪ್ರದೇಶದಲ್ಲಿ ಜಾತಿ ವಿರೋಧಿ ಹಿಂಸಾಚಾರ ಹೆಚ್ಚುತ್ತಿದೆ. ಈ ಪ್ರದೇಶಗಳಲ್ಲಿ ಕಾರ್ಮಿಕರನ್ನು ಕಟ್ಟಿಹಾಕಿ ಹಲ್ಲೆ ಮಾಡುವುದು ಸಾಮಾನ್ಯವಾಗಿದೆ ಎಂದು ಸತ್ಯ ಶೋಧನಾ ತಂಡದ ಕಾರ್ಯನಿರ್ವಾಹಕ ನಿರ್ದೇಶಕ ಕತೀರ್ ಹೇಳಿದ್ದಾರೆ. ಇತ್ತೀಚೆಗೆ ಶಿವಕುಮಾರ್ ಎಂಬ ಯುವಕನನ್ನು ಗುಂಪೊಂದು ಮರಕ್ಕೆ ಕಟ್ಟಿ ಥಳಿಸಿ ಕೊಂದು ಹಾಕಿತ್ತು. ತಂಜಾವೂರಿನಲ್ಲಿಯೂ ಇದೇ ರೀತಿಯ ಘಟನೆ ನಡೆದಿದೆ. ತಂಜಾವೂರು ಜಿಲ್ಲೆಯ ಪೂಂಡಿ ನಿವಾಸಿ ರಾಹುಲ್ (21) ಅವರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಲಾಗಿತ್ತು. ವೇತನ ಕೇಳಿದ್ದಕ್ಕಾಗಿ ತನ್ನನ್ನು ಕಟ್ಟಿಹಾಕಿ ಥಳಿಸಲಾಗಿದೆ ಎಂದು ರಾಹುಲ್ ಹೇಳಿದ್ದಾರೆ.