ಮಧುರೈ: ಮಳೆಗಾಲ ಮುಗಿಯುವರೆಗೆ ತಮಿಳುನಾಡಿನ ಅಮ್ಮಾ ಕ್ಯಾಂಟೀನ್ ವತಿಯಿಂದ ಉಚಿತವಾಗಿ ಊಟದ ವ್ಯವಸ್ಥೆಗೊಳಿಸಲಾಗುವುದೆಂದು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಘೋಷಿಸಿದರು.
ಮಂಗಳವಾರ ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆನ್ನೈ ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಸರ್ಕಾರದಿಂದ ಮಂಜೂರಾದ ಕೋಟ್ಯಂತರ ರೂಪಾಯಿ ಎಲ್ಲಿ ಹೋಗಿದೆ ಎಂದು ಪ್ರಶ್ನಿಸುವ ಮೂಲಕ ಎ.ಐ.ಡಿ.ಎಂ.ಕೆ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮಾತ್ರವಲ್ಲ ಈ ಹಿಂದಿನ ಎ.ಐ.ಎ.ಡಿ.ಎಂ.ಕೆ ಸರ್ಕಾರ, ಚರಂಡಿ, ಒಳಚರಂಡಿ ಮತ್ತು ಇತರ ಯೋಜನೆಗಳ ಅನುಷ್ಠಾನದಲ್ಲಿ ಭ್ರಷ್ಟಾಚಾರವನ್ನು ಎಸಗಿದೆ ಎಂದು ಮಾಧ್ಯಮದ ಮೂಲಕ ಅರೋಪಿಸಿದರು. ಈ ಸಂಬಂಧ ಯೋಜನೆಗಳಲ್ಲಿ ಅಕ್ರಮವೆಸಗಿರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಕಳೆದ 3 ದಿನಗಳಿಂದ ತಮಿಳ್ನಾಡಿನಲ್ಲಿ ಸುರಿಯುತ್ತಿರುವ ಧಾರಕಾರ ಮಳೆಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದ್ದು, ಅಪಾರ ನಷ್ಟ ಅನುಭವಿಸಿದೆ ಎಂದು ಹೇಳಲಾಗುತ್ತಿದೆ.
ಸತತ ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯ ನಡುವೆ ಚೆನ್ನೈನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ನಂತರ ಸ್ಟಾಲಿನ್ ಪರಿಹಾರವನ್ನು ಘೋಷಿಸಿದರು. ಈ ಸಂದರ್ಭದಲ್ಲಿ ನಗರದ ವಿವಿಧೆಡೆ ಆಹಾರದ ಪೊಟ್ಟಣಗಳನ್ನು ವಿತರಿಸಿ ಸಾರ್ವಜನಿಕ ವ್ಯಾಪಕ ಪ್ರಶಂಸೆಗೆ ಪಾತ್ರರಾದರು.