ಮೊದಲ ಅಧಿಕೃತ ಸಂವಹನ: ಭಾರತಕ್ಕೆ ವಾಣಿಜ್ಯ ವಿಮಾನ ಯಾನ ಆರಂಭಿಸಲು ತಾಲಿಬಾನ್ ಕೋರಿಕೆ

Prasthutha|

ಕಾಬೂಲ್: ತಾಲಿಬಾನ್ ಹಿಡಿತದ ಅಫ್ಘಾನ್ ನಾಗರಿಕ ವಿಮಾನ ಯಾನ ಪ್ರಾಧಿಕಾರವು ಭಾರತದ ನಾಗರಿಕ ವಿಮಾನ ಯಾನದ ಮಹಾ ನಿರ್ದೇಶಕರಿಗೆ ಎರಡು ದೇಶಗಳ ನಡುವೆ ವಾಣಿಜ್ಯ ವಿಮಾನಗಳ ಹಾರಾಟವನ್ನು ಆರಂಭಿಸುವಂತೆ ಮನವಿ ಮಾಡಿದೆ.

- Advertisement -

ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ್ ಲೆಟರ್ ಹೆಡ್ ನಲ್ಲಿ ಈ ಮನವಿ ಬಂದಿದ್ದು, ತಾಲಿಬಾನರು ಆಗಸ್ಟ್ ನಲ್ಲಿ ಮತ್ತೆ ಅಧಿಕಾರ ವಹಿಸಿಕೊಂಡ ಮೇಲೆ ಭಾರತದ ಜೊತೆ ನಡೆಸಿರುವ ಮೊದಲ ಅಧಿಕೃತ ವ್ಯವಹಾರ ಇದಾಗಿದೆ.
ಭಾರತವು ಇನ್ನೂ ತಾಲಿಬಾನ್ ಅಫ್ಘಾನಿಸ್ತಾನಕ್ಕೆ ಮನ್ನಣೆ ನೀಡಿಲ್ಲವಾದರೂ ಕಳೆದ ತಿಂಗಳು ಕತಾರ್ ನಲ್ಲಿ ಈ ಬಗೆಗೆ ಆರಂಭಿಕ ಪೀಠಿಕೆ ಹಾಕಿತ್ತು.

ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಪಲಾಯನ ಮತ್ತು ತಾಲಿಬಾನಿಗರು ಕಾಬೂಲನ್ನು ವಶಪಡಿಸಿಕೊಂಡ ಆಗಸ್ಟ್ 15ರಿಂದ ಭಾರತದ ಎಲ್ಲ ವಿಮಾನ ಯಾನಗಳನ್ನು ನಿಲ್ಲಿಸಲಾಗಿತ್ತು. ಇದೊಂದು ಬಿರುಗಾಳಿಯ ದಂಡಯಾತ್ರೆ, 10 ದಿನಗಳಲ್ಲಿ ತಾಲಿಬಾನಿಗರು ಎಲ್ಲ ಜಿಲ್ಲೆಗಳನ್ನು ವಶಪಡಿಸಿಕೊಂಡಿದ್ದರು.

- Advertisement -

ಅಮೆರಿಕದ ಕೊನೆಯ ವಿಮಾನ ಆಗಸ್ಟ್ 31ರಂದು ತೆರಳುವವರೆಗೆ ಎರಡು ವಾರ ಕಾಬೂಲು ವಿಮಾನ ನಿಲ್ದಾಣವು ಜನರನ್ನು ತೆರವು ಗೊಳಿಸುವ ಕೇಂದ್ರ ಬಿಂದುವಾಗಿತ್ತು.

ಮನವಿ ಪತ್ರವು ಸೆಪ್ಟೆಂಬರ್ 7ರ ದಿನಾಂಕ ಹೊಂದಿದ್ದು, ಅದಕ್ಕೆ ಹಂಗಾಮಿ ನಾಗರಿಕ ವಿಮಾನ ಯಾನ ಸಚಿವ ಅಲ್ಹಾಜ್ ಹಮೀದುಲ್ಲಾ ಅಖುನ್ ಜಾದಾ ಸಹಿ ಮಾಡಿದ್ದಾರೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧ ಕಾಲದಲ್ಲಿ ತಾಲಿಬಾನಿಗರು 14 ಸದಸ್ಯರ ತಾತ್ಕಾಲಿಕ ಮಂತ್ರಿ ಮಂಡಲ ರಚಿಸಿದ್ದು ಅದರಲ್ಲಿ ಅಕುನ್ ಝಾದಾ ಒಬ್ಬರು. ಮೊದಲ ತಾಲಿಬಾನ್ ಆಡಳಿತ ಕಾಲದಲ್ಲಿ ಅವರು ಅರಿಯಾನಾ ಏರ್ ಲೈನ್ಸ್ ನ ಮುಖ್ಯಸ್ಥರಾಗಿದ್ದರು.

“ಅಮೆರಿಕದವರು ಬರಿದಾಗಿಸಿ ಹೋಗುವ ಕಾಲದಲ್ಲಿ ಬಹುಪಾಲು ಕಾಬೂಲು ವಿಮಾನ ನಿಲ್ದಾಣವನ್ನು ಹಾಳು ಮಾಡಿದ್ದುದು ನಿಮಗೆ ತಿಳಿದಿರಬೇಕು. ನಮ್ಮ ಗೆಳೆಯ ದೇಶ ಕತಾರ್ ತಂತ್ರಜ್ಞರ ಬೆಂಬಲದಿಂದ ಈಗ ವಿಮಾನ ನಿಲ್ದಾಣ ಮತ್ತೆ ಸಿದ್ಧವಾಗಿದ್ದು ಅದಕ್ಕೆ ‘ನೋಟಮ್’ ತೊಂದರೆಯಿಲ್ಲ ಸರ್ಟಿಫಿಕೇಟನ್ನು ಸಹ ಸೆಪ್ಟೆಂಬರ್ 6ರಂದು ನೀಡಲಾಗಿದೆ ಎಂದು ಆ ಪತ್ರದಲ್ಲಿ ಭಾರತೀಯ ನಾಗರಿಕ ವಿಮಾನ ಯಾನ ಪ್ರಾಧಿಕಾರದ ಡಿಜಿಗೆ ಬರೆದ ಪತ್ರದಲ್ಲಿ ಅಕುನ್ ಝಾದಾ ವಿವರಿಸಿದ್ದಾರೆ.

ಈ ಪತ್ರದ ಉದ್ದೇಶ ನಮ್ಮ ದೇಶದ ಅರಿಯಾನಾ ಅಫ್ಘಾನ್ ಏರ್ ಲೈನ್, ಕಾಮ್ ಏರ್ ಹಾಗೂ ತಮ್ಮ ದೇಶದ ವಿಮಾನಗಳು ಎರಡು ದೇಶಗಳ ಪ್ರಯಾಣಿಕರಿಗೆ ಸೇವೆ ಸಲ್ಲಿಸಲಿ ಎಂಬ ಪರಸ್ಪರ ತಿಳಿವಳಿಕೆಯ ಒಪ್ಪಂದದಂತೆ ಬರೆದುದಾಗಿದೆ. ಆದ್ದರಿಂದ ತಾವು ವಾಣಿಜ್ಯ ವಿಮಾನ ಸಾರಿಗೆ ಆರಂಭಿಸಲು ಅಫ್ಫಾನ್ ನಾಗರಿಕ ವಿಮಾನಯಾನ ಸಂಸ್ಥೆ ವಿನಂತಿಸಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ. ಅಂತಿಮವಾಗಿ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನವು ತಮ್ಮ ವಿಮಾನಗಳಿಗೆ ಎಲ್ಲ ಬಗೆಯ ರಕ್ಷಣೆ ಒದಗಿಸುತ್ತದೆ ಎಂಬಲ್ಲಿಗೆ ಪತ್ರ ಮುಗಿದಿದೆ.

ಕಾಬೂಲಿನಿಂದ ಸುದ್ದಿ ಸಂಸ್ಥೆಗಳೊಡನೆ ಮಾತನಾಡಿದ ಅರಿಯಾನಾ ಏರ್ ಲೈನ್ಸ್ ನ ಉಪಾಧ್ಯಕ್ಷ ಸಲೀಂ ರಹೀಮಿ, ಇದು ಅಧಿಕೃತ ಪತ್ರ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಸಹೊದ್ಯೋಗಿಗಳು ದೆಹಲಿಯಲ್ಲಿ ಆ ಬಗೆಗೆ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದೂ ಹೇಳಿದರು.

ಸದ್ಯ ಇರಾನ್ ಮತ್ತು ಪಾಕಿಸ್ತಾನಗಳಿಂದ ಮಾತ್ರ ಅಫ್ಘಾನಿಸ್ತಾನಕ್ಕೆ ಮಾಮೂಲಿ ವಿಮಾನ ಹಾರಾಟಗಳು ಇವೆ. ಅಲ್ಲದೆ ಯುಎಇ, ಕತಾರ್, ಟರ್ಕಿ, ಉಕ್ರೇನ್ ಗಳಿಂದ ವಿಶೇಷ ವಿಮಾನಗಳ ಹಾರಾಟಗಳು ಇವೆ.
ಭಾರತದ ನಾಗರಿಕ ವಿಮಾನ ಯಾನ ಪ್ರಾಧಿಕಾರವು ಈ ಬಗೆಗೆ ಇನ್ನೂ ಏನೂ ಹೇಳಿಲ್ಲ. ಈ ನಡುವೆ ತಾಲಿಬಾನ್ ವಿದೇಶಾಂಗ ಸಚಿವಾಲಯವು ಒಂದು ಹೇಳಿಕೆ ಹೊರಡಿಸಿದ್ದು ಎಲ್ಲ ದೇಶಗಳು ಕಾಬೂಲಿಗೆ ತಮ್ಮ ವಿಮಾನ ಯಾನಗಳನ್ನು ಹಿಂದಿನಂತೆಯೇ ಆರಂಭಿಸಬಹುದು ಎಂದು ಹೇಳಲಾಗಿದೆ.

ಕತಾರ್ ಮತ್ತು ಟರ್ಕಿಗಳು ವಿಮಾನ ಯಾನ ನಿರ್ವಹಣೆ ಬಗೆಗೆ ಮಾತನಾಡಿವೆ. ಆದರೆ ತಾಲಿಬಾನ್ ಅದಕ್ಕೆ ಒಪ್ಪಿಲ್ಲ. ಟರ್ಕಿಯ ತಂತ್ರಜ್ಞ ಸಿಬ್ಬಂದಿಯನ್ನು ಇಲ್ಲಿ ಭದ್ರತಾ ದೃಷ್ಟಿಯಿಂದ ಇಟ್ಟುಕೊಳ್ಳಲಾಗಿದೆ.

ಈ ನಡುವೆ ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರು ಸುದ್ದಿ ಸಂಸ್ಥೆಗಳ ಜೊತೆ ಮಾತನಾಡುತ್ತ ಅಫ್ಘಾನಿಸ್ತಾನದಲ್ಲಿ ಎಲ್ಲರನ್ನು ಒಳಗೊಂಡ ಸರಕಾರ ಬರುವವರೆಗೆ ವಿಮಾನ ನಿಲ್ದಾಣ ನಿರ್ವಹಣೆಗೆ ನಾವು ಸಿದ್ಧರಿಲ್ಲ ಎಂದು ಹೇಳಿದ್ದಾರೆ.

ಒಂದು ದೇಶಕ್ಕೆ ಮಾನ್ಯತೆ ನೀಡುವುದಕ್ಕೂ ಆ ದೇಶದೊಡನೆ ಆಕಾಶ ಯಾನ ಇಟ್ಟುಕೊಳ್ಳುವುದಕ್ಕೂ ಸಂಬಂಧವಿಲ್ಲ. ಆದರೆ ಭಾರತ ಸಹಿತ ಹಲವು ದೇಶಗಳು ವಾಣಿಜ್ಯ ವಿಮಾನ ಯಾನ ಮಾಮೂಲು ಗೊಳಿಸುವ ಬಗೆಗೆ ಇನ್ನೂ ಏನೂ ತೀರ್ಮಾನ ತೆಗೆದುಕೊಂಡಿಲ್ಲ.
1,000ದಷ್ಟು ಅಫ್ಘಾನಿಗಳು ತಾಲಿಬಾನ್ ಆಡಳಿತ ಆರಂಭವಾದಾಗ ಆಗಮಿಸಿದ್ದಾರೆ. ಅವರು ರಾಯಭಾರ ಕಚೇರಿಯಲ್ಲಿ ಮುಂದಿನ ನಡೆ, ಹಿಂದಿರುಗುವ ಬಗೆಗೆ ಎಡತಾಕುತ್ತಿದ್ದಾರೆ. ಹಲವರು ವಿದ್ಯಾರ್ಥಿಗಳು, ಆಸ್ಪತ್ರೆ ಚಿಕಿತ್ಸೆಗಾಗಿ ಬಂದವರೂ ಇಲ್ಲಿದ್ದಾರೆ.

22 ವರುಷದ ಅಜಿತಾ ಉಸ್ಮಾನಿ ಮಗಳೊಂದಿಗೆ ದೆಹಲಿಗೆ ಚಿಕಿತ್ಸೆಗೆ ಬಂದಿದ್ದರು. ಗಂಡ ಕಾಬೂಲಿನಲ್ಲೇ ಇದ್ದಾರೆ. ಬರೇ 10 ದಿನದ ಚಿಕಿತ್ಸೆಗೆ ಬಂದ ಅವರು ಈಗ ಎರಡು ತಿಂಗಳಿನಿಂದ ಇಲ್ಲಿ ರಾಯಭಾರ ಕಚೇರಿಗೆ ಎಡತಾಕುತ್ತಿದ್ದಾರೆ. ಈಗ ಉಸ್ಮಾನಿ ಮತ್ತೊಂದು ಅಫ್ಘಾನಿ ಕುಟುಂಬದ ಜೊತೆಗೆ ದೆಹಲಿ ಲಜಪತ್ ನಗರದ ಉದ್ಯಾನದ ಬಳಿ ವಾಸಿಸುತ್ತಿದ್ದಾರೆ. ಹಣವಿಲ್ಲದೆ ಉಪವಾಸದಲ್ಲಿದ್ದಾರೆ.
ನಾವು ಉದ್ಯಾನದಲ್ಲಿ ನಿದ್ದೆ ಮಾಡಲು ಆಗುತ್ತಿಲ್ಲ, ಆದರೆ ಬೇರೆ ದಾರಿಯಿಲ್ಲ ಎನ್ನುತ್ತಾರೆ ಉಸ್ಮಾನಿ.

ಗ್ರಾಫಿಕ್ ಡಿಸೈನರ್ ಅಬ್ದುಲ್ ಮೋಯಿಜ್ ಪೋಪಲ್ಜಾಯ್ ಅವರು ತನ್ನ ಮಡದಿಯ ಗರ್ಭ ಸಾಮರ್ಥ್ಯ ಪರೀಕ್ಷೆಗೆ ಆಗಸ್ಟ್ 3ರಂದು ದೆಹಲಿಗೆ ಬಂದಿದ್ದರು. ರಾಯಭಾರ ಕಚೇರಿಯವರು ಭಾರತವು ಸದ್ಯ ಯಾರನ್ನೂ ಹೋಗಲು ಅನುಮತಿಸುತ್ತಿಲ್ಲ ಎನ್ನುತ್ತಾರೆ. ಏನು ಮಾಡುವುದು ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಮೋಯಿಜ್.

ಹಲವರು ಹೇಳುವಂತೆ ಹೊರಡಲು ಅನುಮತಿ ಇಲ್ಲ ಎಂದು ಅವರಿಗೆ ಹೇಳಲಾಗಿದೆ. ಉಸ್ಮಾನಿ ನನಗೆ ತಿನ್ನಲು ಇಲ್ಲ, ನನಗೆ ಬೇಗ ಹೋಗಲು ಅನುಮತಿ ನೀಡಲಿ ಎನ್ನುತ್ತಾರೆ. ಅತಂತ್ರರಾದಂತೆ ಈ ಜನರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ.
ಆದರೆ ಹಿರಿಯ ಅಧಿಕಾರಿಗಳು ವೀಸಾ ಇದ್ದರೆ ಯಾರು ಬೇಕಾದರೂ ಹೋಗಬಹುದು. ವೀಸಾ ದಿನ ಮುಗಿದವರು ಹೊಸ ವೀಸಾ ಪಡೆಯಬೇಕು ಎಂದು ಸ್ಪಷ್ಟನೆ ನೀಡಿದ್ದಾರೆ.

ಒಟ್ಟಿನಲ್ಲಿ ಅಫ್ಘಾನಿಸ್ತಾನದವರು ಉಭಯ ದೇಶಗಳ ನಡುವೆ ವಿಮಾನ ಯಾನ ಆರಂಭಕ್ಕೆ ಕಾತುರರಾಗಿದ್ದಾರೆ.

(ಕೃಪೆ: ದಿ ವೈರ್)



Join Whatsapp