ಅತ್ಯಾಚಾರಿಗಳು, ಕೊಲೆಗಡುಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ, ಬಿಲ್ಕೀಸ್ ಪ್ರಕರಣದ ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳುಹಿಸಿ: ಯಾಸ್ಮಿನ್ ಫಾರೂಕಿ

Prasthutha|

ನವದೆಹಲಿ: ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬರುತ್ತಿದ್ದು, ಬಿಜೆಪಿ ಸರ್ಕಾರ ಅತ್ಯಾಚಾರಿಗಳ ಮತ್ತು ಕೊಲೆಗಡುಕರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಹಿಳೆಯರು, ಮಕ್ಕಳು ಮತ್ತು ದುರ್ಬಲ ವರ್ಗಗಳಿಗೆ ರಕ್ಷಣೆ ಒದಗಿಸಿಕೊಡಬೇಕು ಎಂದು ಎಸ್ ಡಿಪಿಐ ಒತ್ತಾಯಿಸಿದೆ.

- Advertisement -

ಈ ಬಗ್ಗೆ ಪ್ರಕಟಣೆ ನೀಡಿರುವ ಎಸ್ ಡಿಪಿಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಸ್ಮಿನ್ ಫಾರೂಕಿ, ಬಿಜೆಪಿ ಸರ್ಕಾರ ಅತ್ಯಾಚಾರ ಮತ್ತು ಕೊಲೆಯಂತಹ ಹೀನ ಕೃತ್ಯಗಳ ತಡೆಗೆ ಇರುವ ಕಾನೂನುಗಳನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ವಿಫಲವಾಗುತ್ತಿದೆ. ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್ ಬಿಜೆಪಿ ಸರ್ಕಾರದ ವಿರುದ್ಧ ಜನರಲ್ಲಿ ಆಕ್ರೋಶ ಇರುವ ಬೆನ್ನಲ್ಲೇ ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿರುವ ಒಂಬತ್ತು ವರ್ಷದ ಮತ್ತು ಐದು ವರ್ಷದ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಜನರನ್ನು ಆತಂಕಕ್ಕೆ ದೂಡಿದ್ದು ಇದು ಬಿಜೆಪಿಯ “ಬೇಟಿ ಬಚಾವೋ, ಬೇಟಿ ಪಡಾವೋ” ಎಂಬ ಘೋಷಣೆ ಕೇವಲ ಬೂಟಾಟಿಕೆ ಎಂದು ತೋರಿಸುತ್ತದೆ ಎಂದು ಅವರು ಹೇಳಿದರು.

ಆಗಸ್ಟ್ 18ರಂದು ಇಬ್ಬರು ಹೆಣ್ಣು ಮಕ್ಕಳ ಅತ್ಯಾಚಾರ ನಡೆದಿದೆ. ಅದರಲ್ಲಿ ಒಂದು ಹೆಣ್ಣು ಮಗುವನ್ನು ಕೊಲೆ ಮಾಡಲಾಗಿದೆ. ಅತ್ಯಾಚಾರಿ ಕೊಲೆಗಡುಕ 25 ವರ್ಷದ ಘಾಜಿಯಾಬಾದ್ ನ ಮೋದಿ ನಗರದ ನಿವಾಸಿ ಕಪಿಲ್ ಕಶ್ಯಪ್ ಎಂಬುವವನಾಗಿದ್ದಾನೆ. ಈ ಎರಡು ಪ್ರಕರಣಗಳು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಏರುಗತಿಯಲ್ಲಿ ಇರುವುದಕ್ಕೆ ತಾಜಾ ಉದಾಹರಣೆಗಳಾಗಿವೆ. ಈ ಸ್ಥಿತಿಗೆ ಅಪರಾಧಿಗಳಲ್ಲಿ ಕಾನೂನಿನ ಮೇಲೆ ಭಯ ಇಲ್ಲದೆ ಇರುವುದೇ ಕಾರಣ ಎಂದು ಹೇಳಬಹುದು. ಬಿಲ್ಕಿಸ್ ಬಾನೋ ಪ್ರಕರಣವನ್ನೇ ನೋಡಿದಾಗ, ಅತ್ಯಾಚಾರದಂತಹ ಕ್ರೂರ ಕೃತ್ಯದ ಜೊತೆಗೆ ಮೂರು ವರ್ಷದ ಮಗು ಸೇರಿದಂತೆ ಹಲವರ ಕೊಲೆಯೂ ನಡೆದಿದ್ದ ಪ್ರಕರಣದಲ್ಲಿ ಎಲ್ಲ ಅಪರಾಧಗಳೂ ನ್ಯಾಯಾಲಯದಲ್ಲಿ ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದವರ ಶಿಕ್ಷೆ ಕಡಿತಗೊಳಿಸಿ ಅವರನ್ನು ಬಿಡುಗಡೆ ಮಾಡಲಾಯಿತು. ಅಲ್ಲದೆ ಅವರು ಜೈಲಿನಿಂದ ಹೊರ ನಡೆದಾಗ ಉಗ್ರ ಸಂಘಟನೆ ವಿಶ್ವ ಹಿಂದೂ ಪರಿಷತ್ ಆ ಅಪರಾಧಿಗಳನ್ನು ಸ್ವಾಗತಿಸುವುದು ಮಾತ್ರವಲ್ಲದೆ ಅವರಿಗೆ ಸಿಹಿ ತಿನಿಸಿ ಹೊರಜಗತ್ತಿಗೆ ಸ್ವಾಗತಿಸಿದರು. ಇಂತಹ ನಾಚಿಕೆಗೇಡಿನ ಪ್ರಕರಣಗಳಿಂದ ಅಪರಾಧಿಗಳಲ್ಲಿ ಕಾನೂನಿನ ಮೇಲೆ ಭಯ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

- Advertisement -

ಇತ್ತೀಚಿನ ಈ ಎರಡು ಪ್ರಕರಣಗಳನ್ನು ಖಂಡಿಸಿದ ಯಾಸ್ಮಿನ್ ಫಾರೂಕಿ, ಅತ್ಯಾಚಾರಿ ಕೊಲೆಗಡುಕ ಕಶ್ಯಪ್ ಗೆ ಜೀವಾವಧಿ ಶಿಕ್ಷೆ ಆಗಬೇಕು, ಜೊತೆಗೆ ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಅಪರಾಧಿಗಳಾಗಿದ್ದರೂ ಬಿಡುಗಡೆಗೊಳಿಸಿದ ಹನ್ನೊಂದು ಜನರ ಬಿಡುಗಡೆಯನ್ನು ವಾಪಸ್ ಪಡೆದು ಮಹಿಳೆಯರು ಮತ್ತು ಅಮಾಯಕ ಮಕ್ಕಳಲ್ಲಿ ಸರ್ಕಾರ ಕಾನೂನು ಮತ್ತು ನ್ಯಾಯದಲ್ಲಿ ನಂಬಿಕೆಯನ್ನು ಮರುಸ್ಥಾಪನೆ ಮಾಡಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Join Whatsapp