ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಕ್ರಮಕೈಗೊಳ್ಳಿ: ಡಿ.ಸಿ. ರವಿಕುಮಾರ್ ಸೂಚನೆ

Prasthutha|

ಮಂಗಳೂರು: ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದವರು ಜಿಲ್ಲೆಯಲ್ಲಿ ಕಾಳ್ಗಿಚ್ಚು ಹಾಗೂ ಇತರೆ ಬೆಂಕಿ ಅವಘಡಗಳನ್ನು ನಂದಿಸುವ ಕಾರ್ಯವನ್ನು ಉತ್ತಮವಾಗಿ ಮಾಡುತ್ತಿದ್ದು, ಈ ಕಾರ್ಯಕ್ಕೆ ಮತ್ತಷ್ಟು ಅನುಕೂಲವಾಗುವಂತೆ ಜಿಲ್ಲೆಯಲ್ಲಿರುವ ಬೃಹತ್ ಕೈಗಾರಿಕೆಗಳು, ಉದ್ದಿಮೆಗಳು ಬೆಂಕಿ ನಂದಿಸುವ ನೀರಿನ ಟ್ಯಾಂಕರ್’ಗಳನ್ನು ಒದಗಿಸಿಕೊಡಲು ಕೈಜೋಡಿಸುವಂತೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಕರೆ ನೀಡಿದ್ದಾರೆ.
ಅವರು ಶುಕ್ರವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಂಸಿಎಫ್, ಎಂಆರ್’ಪಿಲ್ ಐಓಸಿ ಸೇರಿದಂತೆ ಸಾಕಷ್ಟು ಬೃಹತ್ ಕೈಗಾರಿಕೆಗಳು ಜಲ್ಲೆಯಲ್ಲಿವೆ, ಬೇಸಿಗೆಯಲ್ಲಿ ಹೆಚ್ಚು ಕಂಡುಬರುವ ಕಾಳ್ಗಿಚ್ಚು ಶಮನಕ್ಕೆ ಹಾಗೂ ಇತರೆಡೆ ಸಂಭವಿಸುವ ಬೆಂಕಿ ಅವಘಡಗಳನ್ನು ನಂದಿಸಲು ಇದೀಗ ಅಗ್ನಿಶಾಮಕ ದಳದಲ್ಲಿ ಇರುವ ಟ್ಯಾಂಕರ್’ಗಳೊಂದಿಗೆ ಇನ್ನಷ್ಟು ಟ್ಯಾಂಕರ್ ಗಳು ಇದ್ದಲ್ಲೀ ಅನುಕೂಲವಾಗಲಿದೆ. ಆ ದಿಸೆಯಲ್ಲಿ ವಹಿಸಬಹುದಾದ ಕ್ರಮಗಳ ಬಗ್ಗೆ ಕಾರ್ಯಪ್ರವೃತ್ತರಾಗುವಂತೆ ಜಿಲ್ಲಾ ಕೈಗಾರಿಕಾ ಹಾಗೂ ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್ ಅವರಿಗೆ ಸೂಚಿಸಿದರು.
ಈ ಕುರಿತಂತೆ ಅಗ್ನಿಶಾಮಕ ದಳದಿಂದ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಒಂದು ವೇಳೆ ಅಕಾಲಿಕ ಮಳೆ ಎದುರಾದಲ್ಲಿ ಸಾರ್ವಜನಿಕರ ಮೇಲೆ ಉಂಟಾಗುವ ದುಷ್ಪರಿಣಾಮಗಳಿಗೆ ಅಗತ್ಯ ಔಷಧಿಗಳನ್ನು ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನಿರಿಸಿಕೊಳ್ಳಬೇಕು ಹಾಗೂ ಬಿಸಿಗಾಳಿ ಬೀಸುವ ಬಗ್ಗೆ ಸಾರ್ವಜನಿಕರಿಗೆ ಆಕಾಶವಾಣಿ ಹಾಗೂ ವಿವಿಧ ಮಾಧ್ಯಮಗಳ ಮೂಲಕ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸಿಕೊಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಯವರು, ಜಿಲ್ಲೆಯ ಗೋಶಾಲೆಗಳಲ್ಲಿ ನೀರು ಹಾಗೂ ಮೇವು ಕಡಿಮೆಯಾಗದಂತೆ ಎಚ್ಚರ ವಹಿಸಬೇಕು ಎಂದು ಪಶುಸಂಗೋಪನೆ ಇಲಾಖೆಯ ಅಧಿಕಾರಿಗೆ ನಿರ್ದೇಶನ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಲ್ಲಾ ವಾರ್ಡ್ಗಳಲ್ಲೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಬೇಸಿಗೆಯಲ್ಲಿ ಲೋಪಕ್ಕೆ ಆಸ್ಪದವಿರದಂತೆ ಆಸ್ಪದವಿಲ್ಲದಂತೆ ಕುಡಿಯುವ ನೀರು ಪೂರೈಕೆ ಮಾಡಲು ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು. ತುಂಬೆ ಅಣೆಕಟ್ಟಿನಲ್ಲಿ ನೀರು ಅತ್ಯಂತ ಕಡಿಮೆಯಾಗುವ ಮಟ್ಟ ತಲುಪಿದ್ದಲ್ಲೀ, ಪರ್ಯಾಯವಾಗಿ ದಿನ ಬಿಟ್ಟು ದಿನ ನೀರು ಪೂರೈಕೆ ಹಾಗೂ ಕನಿಷ್ಠ 3 ರಿಂದ 4 ತಾಸು ನೀರು ಪೂರೈಕೆಯ ಬಗ್ಗೆಯು ಸಭೆಯಲ್ಲಿ ಚರ್ಚೆ ನಡೆಯಿತು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಮುಲ್ಕಿಯಲ್ಲಿ 10, ಮೂಡುಬಿದರೆಯಲ್ಲಿ 2 ಹಾಗೂ ಸೋಮೇಶ್ವರದಲ್ಲಿ 4 ಟ್ಯಾಂಕರ್’ಗಳ ಮೂಲಕ ನೀರು ಸರಬರಾಜು ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ, ಉಳಿದಂತೆ ಇತರೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿ ಸಭೆಗೆ ತಿಳಿಸಿದಾಗ, ಸಮಸ್ಯೆ ಎದುರಾದರಲ್ಲಿ ಜಿಲ್ಲೆಯ ಜಿಯೋಲಾಜಿಸ್ಟ್’ಗಳ ನೆರವಿನಿಂದ ಹೊಸ ಬೋರ್’ವೆಲ್’ಗಳನ್ನು ಕೊರೆಸಿ ನೀರು ಪೂರೈಕೆಗೆ ಅಗತ್ಯ ಕ್ರಮ ವಹಿಸಬೇಕು, ಎಲ್ಲಿ ಅಂರ್ತಜಲ ಲಭ್ಯವೂ, ಸರ್ಕಾರಿ ಜಾಗ, ಸರ್ಕಾರಿ ಕಚೇರಿಗಳ ಆಸುಪಾಸು, ಶಾಲೆ-ಅಂಗನವಾಡಿ ವ್ಯಾಪ್ತಿ ಸೇರಿದಂತೆ ಅಂರ್ತಜಲ ಲಭಿಸುತ್ತದೆಯೋ ಅಲ್ಲಿ ಬೋರ್ವೆಲ್ ಕೊರೆಯಿಸಿ ನೀರು ಪೂರೈಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಕುಡಿಯುವ ನೀರಿಗೆ ತಾತ್ವಾರ ಎದುರಾದಂತೆ ಎಚ್ಚರ ವಹಿಸಲು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಕಿರಿಯ ಸಹಾಯಕ ಇಂಜಿನಿಯರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಳಮಟ್ಟದ ಸಿಬ್ಬಂದಿಗಳನ್ನು ತಂಡವನ್ನು ರಚಿಸಲಾಗಿದೆ, ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ಸ್ಥಿತಿಗತಿಗಳನ್ನು ಅವಲೋಕಿಸಲಾಗುತ್ತಿದೆ, ಬಾಳೆಪುಣಿ, ನರಿಕೊಂಬು, ಕೋಣಾಜೆ, ತಲಪಾಡಿ ಹಾಗೂ ಮಂಜನಾಡಿಯಲ್ಲಿ ಒಣಪ್ರದೇಶವಿರುವ ಕಾರಣ, ಅಂರ್ತಜಲ ಮಟ್ಟ ಅತ್ಯಂತ ಕಡಿಮೆ ಇದೆ, ಅಲ್ಲಿ ಲಭ್ಯವಿರುವ ಅನುದಾನದಲ್ಲಿ ಬೋರ್ವೆಲ್ಗಳ ಡೀಪನಿಂಗ್ ಹಾಗೂ ಫ್ಲಷಿಂಗ್ ಮಾಡಲಾಗುತ್ತಿದೆ, ಅವುಗಳಲ್ಲಿ ಕೆಲವೊಂದು ಉತ್ತಮ ಫಲ ಬಂದಿದೆ, ಉಳಿದೆಡೆ ಹೊಸ ಬೋರ್ವೆಲ್ಗಳನ್ನು ಹಾಕಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಸಭೆಗೆ ಮಾಹಿತಿ ನೀಡಿದರು.
ಬೇಸಿಗೆ ಕಾಲವಾದ ಕಾರಣ ಮೆಸ್ಕಾಂನವರು ಅಗತ್ಯ ಇರುವ ಕಡೆಗಳಲ್ಲಿ ತುರ್ತಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡಬೇಕು, ಹೈ ವೋಲ್ಟೇಜ್ ವಿದ್ಯುತ್ ತಂತಿಗಳು, ಟ್ರಾನ್ಸ್ ಫಾರ್ಮರ್’ಗಳು ಹಾಗೂ ವಿದ್ಯುತ್ ತಂತಿಗಳು ಹಾದು ಹೋಗಿರುವ ಸ್ಥಳಗಳಲ್ಲಿ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸಬೇಕು, ಇದರಿಂದಲೂ ಬೆಂಕಿ ಅವಘಡಗಳನ್ನು ತಪ್ಪಿಸಬಹುದಾಗಿದೆ, ಅರಣ್ಯ ಇಲಾಖೆಯವರು ಈ ಕಾರ್ಯದಲ್ಲಿ ಸಹಕರಿಸಬೇಕು ಎಂದರು.
ಒಟ್ಟಾರೆ ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ, ಜಾನುವಾರುಗಳಿಗೆ ನೀರು, ಅರಣ್ಯದಲ್ಲಿ ಕಾಳ್ಗಿಚ್ಚು, ಮಾನವ-ಪ್ರಾಣಿ ಸಂಘರ್ಷ, ಕುಡಿಯುವ ನೀರು ಕಲುಷಿತ ಆಗದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಚೆನ್ನಬಸಪ್ಪ ವೇದಿಕೆಯಲ್ಲಿದ್ದರು.
ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಭರತ್ ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Join Whatsapp