‘ಹರಕೆಕುರಿ’ಗಳಾಗಿದ್ದ 18 ತಬ್ಲೀಘಿ ಜಮಾತ್ ಸದಸ್ಯರ ವಿರುದ್ಧದ ಕೇಸ್ ರದ್ದುಗೊಳಿಸಿದ ಪಾಟ್ನಾ ಹೈಕೋರ್ಟ್

Prasthutha|

ಪಾಟ್ನಾ : ತಬ್ಲೀಘಿ ಜಮಾತ್ ಗೆ ಸಂಬಂಧಿಸಿದ 18 ವಿದೇಶಿಯರ ವಿರುದ್ಧದ ಕ್ರಿಮಿನಲ್ ಕೇಸ್ ಗಳನ್ನು ಪಾಟ್ನಾ ಹೈಕೋರ್ಟ್ ರದ್ದು ಮಾಡಿದೆ.

- Advertisement -

ಕಳೆದ ಮಾರ್ಚ್ ನಲ್ಲಿ ಕೊರೊನ ವೈರಸ್ ಸೋಂಕು ಹರಡುವಿಕೆಯ ಆರಂಭದ ದಿನಗಳಲ್ಲಿ, ಸೋಂಕು ಹರಡುವುದಕ್ಕೆ ಮುಸ್ಲಿಮರು ಕಾರಣ ಎಂಬಂತೆ ಬಿಂಬಿಸಲು ಮಾಧ್ಯಮ ಹಾಗೂ ಆಡಳಿತ ಮೂಲಗಳು ಹರಡಿದ ಸುಳ್ಳುಗಳಿಂದಾಗಿ, ನವದೆಹಲಿಯ ನಿಝಾಮುದ್ದೀನ್ ಪ್ರದೇಶದಲ್ಲಿ ನಡೆದ ತಬ್ಲೀಘಿ ಸಮಾವೇಶದಲ್ಲಿ ಭಾಗವಹಿಸಿದವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಲಾಕ್ ಡೌನ್ ಗೆ ಮೊದಲು ನಡೆದ ಸಮಾವೇಶದಲ್ಲಿ 18 ವಿದೇಶಿಯರು ಭಾಗಿಯಾಗಿರಲಿಲ್ಲ, ಒಂದು ವೇಳೆ ಭಾಗಿಯಾಗಿದ್ದರೂ ಅದು ಧಾರ್ಮಿಕ ಸಿದ್ಧಾಂತಗಳನ್ನು ಪ್ರಚಾರ ಮಾಡಿದ ಅಥವಾ ಬೋಧಿಸಿದಂತೆ ಆಗುವುದಿಲ್ಲ. ಹೀಗಾಗಿ ಈ 18 ವಿದೇಶಿಯರಿಗೆ ಭಾರತಕ್ಕೆ ಆಗಮಿಸಲು ಯಾವ ಕಾರಣಕ್ಕಾಗಿ ವೀಸಾ ನೀಡಲಾಗಿತ್ತೋ, ಆ ವೀಸಾ ನಿಯಮ ಉಲ್ಲಂಘನೆಯಾಗಿಲ್ಲ ಎಂದು ನ್ಯಾ. ರಂಜನ್ ಪ್ರಸಾದ್ ನೇತೃತ್ವದ ನ್ಯಾಯಪೀಠ ಅಭಿಪ್ರಾಯ ಪಟ್ಟಿದ್ದಾರೆ.

- Advertisement -

ಈ ವಿದೇಶಿಯರು ತಬ್ಲಿಘಿ ಸಮಾವೇಶಕ್ಕೂ ಮೊದಲು ದೆಹಲಿಯ ನಿಝಾಮುದ್ದೀನ್ ಮರ್ಕಝ್ ಗೆ ಭೇಟಿ ನೀಡಿದ್ದರು. 11-03-2020ರ ನಂತರ ಅವರು ಬಿಹಾರದ ಅರಾರಿಯಾ ಪ್ರದೇಶದಲ್ಲಿದ್ದರು. 15-03-2020ರಿಂದ ರಿವಾಹಿ ಮರ್ಕಝ್ ನಲ್ಲಿ ವಾಸಿಸಿದ್ದರು ಎಂಬುದು ನ್ಯಾಯಾಲಯಕ್ಕೆ ಮನವರಿಕೆಯಾಗಿದೆ.

ರಿವಾಹಿ ಮರ್ಕಝ್ ನಲ್ಲಿ ಅವರು ಸಿಲುಕಿದ್ದರು, ಅಲ್ಲಿ ಸ್ಥಳೀಯಾಡಳಿತ ಅವರಿಗೆ ಕಡ್ಡಾಯ ಕ್ವಾರಂಟೈನ್ ಗೆ ಒಳಪಡಿಸಿತ್ತು. 12-04-2020ರಂದು ಪೊಲೀಸರು ಅವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು. ಆದಾಗ್ಯೂ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಪೊಲೀಸರಲ್ಲಿ ಸೂಕ್ತ ಸಾಕ್ಷ್ಯಗಳಿರಲಿಲ್ಲ.    



Join Whatsapp