ಟಿ20 ವಿಶ್ವಕಪ್‌ |  ಇಂಗ್ಲೆಂಡ್‌ ಗೆಲುವಿಗೆ ಮಳೆ ಅಡ್ಡಿ, ಐರ್ಲೆಂಡ್‌ ತಂಡಕ್ಕೆ ಚೊಚ್ಚಲ ಗೆಲುವು

Prasthutha|

ಸಿಡ್ನಿ: ಮಳೆ ಅಡ್ಡಿಪಡಿಸಿದ ಟಿ20 ವಿಶ್ವಕಪ್‌ನ ಸೂಪರ್‌ 12ರ ಐರ್ಲೆಂಡ್  ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ 5 ರನ್‌ ಅಂತರದಲ್ಲಿ ಆಘಾತಕಾರಿ ಸೋಲು ಅನುಭವಿಸಿದೆ. ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್‌, ಇಂಗ್ಲೆಂಡ್‌ ವಿರುದ್ಧ ಸಾಧಿಸಿದ ಚೊಚ್ಚಲ ಗೆಲುವು ಇದಾಗಿದೆ.

- Advertisement -

ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಐರ್ಲೆಂಡ್ ನೀಡಿದ 158 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 14.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿತ್ತು. ಈ ಸಮಯದಲ್ಲಿ ಮಳೆ ಆರಂಭವಾಗಿದ್ದರಿಂದ ಪಂದ್ಯಕ್ಕೆ ಅಡ್ಡಿಯಾಯತು. ಹೀಗಾಗಿ ಅಂಪೈರ್‌ಗಳು ಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ ರನ್ ರೇಟ್ ಆಧಾರದ ಮೇಲೆ ಐರ್ಲೆಂಡ್ ಅನ್ನು ‘ಐದು ರನ್‌ಗಳ ಅಂತರದಲ್ಲಿ ವಿಜಯಿ’ ಎಂದು ಘೋಷಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಐರ್ಲೆಂಡ್ ಪವರ್‌ಪ್ಲೇನಲ್ಲಿ 59 ರನ್ ಗಳಿಸಿ ಉತ್ತಮ ಆರಂಭ ಪಡೆದಿತ್ತು. ಬಳಿಕ ಎರಡನೇ ವಿಕೆಟ್‌ಗೆ ಲೋರ್ಕನ್ ಟಕರ್ ಹಾಗೂ ಬಾಲ್ಬಿರ್ನಿ (34 ರನ್‌) ತಂಡವನ್ನು 100 ರ ಗಡಿ ದಾಟಿಸಿದರು. ನಾಯಕ ಆಂಡ್ರ್ಯೂ ಬಲ್ಬಿರ್ನಿ (62) ಅರ್ಧಶತಕದೊಂದಿಗೆ ಮಿಂಚಿದರು. ಇಂಗ್ಲೆಂಡ್​ ಪರ ಬೌಲಿಂಗ್​ನಲ್ಲಿ ಮಾರ್ಕ್​ವುಡ್ ಮತ್ತು ಲಿಯಾಮ್ ಲಿವಿಂಗ್​ಸ್ಟನ್ ತಲಾ 3 ವಿಕೆಟ್ ಪಡೆದರೆ, ಸ್ಯಾಮ್ ಕರನ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

- Advertisement -

ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್​ನಲ್ಲೇ ನಾಯಕ ಬಟ್ಲರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆ ಬಳಿಕವೂ ನಿರಂತರವಾಗಿ ವಿಕೆಟ್​ಗಳು ಉರುಳಿದ ಪರಿಣಾಮ ಇಂಗ್ಲೆಂಡ್ ತಂಡ ಸಂಕಷ್ಟಕ್ಕೆ ಸಿಲುಕಿತು. ಆದರೆ ಒಂದು ಬದಿಯಲ್ಲಿ ತಂಡದ ಇನ್ನಿಂಗ್ಸ್ ಕಟ್ಟಲು ಯತ್ನಿಸಿದ ಮಲಾನ್, 37 ಎಸೆತಗಳಲ್ಲಿ 2 ಬೌಂಡರಿ ಸಹಿತ 35 ರನ್ ಗಳಿಸಿ ಔಟಾದರು. ಆ ಬಳಿಕ ಜೊತೆಯಾದ ಮೊಯಿನ್ ಅಲಿ ಮತ್ತು ಲಿವಿಂಗ್​ಸ್ಟನ್ ವೇಗವಾಗಿ ರನ್ ಗಳಿಸಲು ಮುಂದಾದರು.

ಇಂಗ್ಲೆಂಡ್ ಗೆಲುವಿಗೆ ಮಳೆ ಅಡ್ಡಿ

ಇಂಗ್ಲೆಂಡ್​ ಇನ್ನಿಂಗ್ಸ್​ನ 15ನೇ ಓವರ್​ವೇಳೆ ಮಳೆ ಸುರಿಯಿತು. ಈ ವೇಳೆ ಇಂಗ್ಲೆಂಡ್ ತಂಡ 5 ವಿಕೆಟ್‌ ಕಳೆದುಕೊಂಡು 105 ರನ್‌ ಗಳಿಸಿತ್ತು. ಅಲ್ಲದೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಇಂಗ್ಲೆಂಡ್ ಆಟ ನಿಲ್ಲುವ ವೇಳೆಗೆ 5 ರನ್​ಗಳ ಹಿಂದಿತ್ತು (ಅಂದರೆ ಇಂಗ್ಲೆಂಡ್ ಗೆಲ್ಲಬೇಕಿದ್ದರೆ ಆ ವೇಳೆಗೆ 110 ರನ್ ಗಳಿಸಿರಬೇಕಿತ್ತು). ಹೀಗಾಗಿ ಅಂಪೈರ್‌ಗಳು ಡಿಎಲ್‌ಎಸ್ ವಿಧಾನದ ಮೂಲಕ ಐರ್ಲೆಂಡ್ ತಂಡವನ್ನು ವಿಜೇತವೆಂದು ಘೋಷಿಸಿದರು.



Join Whatsapp