ಟಿ20 ವಿಶ್ವಕಪ್| ಗಾಯಾಳು ಜಸ್ಪ್ರೀತ್ ಬುಮ್ರಾ ಸ್ಥಾನಕ್ಕೆ ಮುಹಮ್ಮದ್ ಶಮಿ ಆಯ್ಕೆ

Prasthutha|

ಮುಂಬೈ: ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿಯಲ್ಲಿ, ಗಾಯಳು ಜಸ್ಪ್ರೀತ್ ಬುಮ್ರಾ ಬದಲು ಯಾರು ಅವಕಾಶ ಪಡೆಯಲಿದ್ದಾರೆ ಎಂಬ ಕುತೂಹಲಕ್ಕೆ ಶುಕ್ರವಾರ ಬಿಸಿಸಿಐ ತೆರೆ ಎಳೆದಿದೆ. ಬುಮ್ರಾ ಸ್ಥಾನಕ್ಕೆ ನಿರೀಕ್ಷೆಯಂತೆಯೇ ಹಿರಿಯ, ಅನುಭವಿ ವೇಗಿ ಮುಹಮ್ಮದ್ ಶಮಿ ಅವರನ್ನು ಬಿಸಿಸಿಐ ಆಯ್ಕೆ ಮಾಡಿದ್ದು, ಈ ವಿಷಯವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

- Advertisement -

ವೇಗದ ಬೌಲರ್ಗಳಾದ ಮುಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಸ್ಟ್ಯಾಂಡ್-ಬೈ ಆಟಗಾರರಾಗಿ ಶೀಘ್ರದಲ್ಲೇ ಆಸ್ಟ್ರೇಲಿಯಾದಲ್ಲಿ ಭಾರತೀಯ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12 ಹಂತಕ್ಕೆ ಪ್ರವೇಶ ಪಡೆದಿರುವ ರಾಷ್ಟ್ರಗಳಿಗೆ, ತಮ್ಮ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಅಕ್ಟೋಬರ್ 15 ರವರೆಗೆ ಸಮಯಾವಕಾಶ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಜಸ್ಪ್ರೀತ್ ಬುಮ್ರಾ ಅವರ ಬದಲಿ ಆಟಗಾರನನ್ನು ಘೋಷಿಸಲು ಬಿಸಿಸಿಐ ವಿಳಂಬ ಮಾಡಿತ್ತು.

- Advertisement -

ಬೆನ್ನು ನೋವಿನಿಂದ ಬಳಲುತ್ತಿರುವ ಬುಮ್ರಾ, ಏಷ್ಯಾ ಕಪ್ ಟೂರ್ನಿಯಿಂದಲೂ ಹೊರಗುಳಿದಿದ್ದರು. ಸಂಪೂರ್ಣವಾಗಿ ಗುಣಮುಖರಾಗುವ ಮುನ್ನವೇ ಬಿಸಿಸಿಐ, ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಬುಮ್ರಾರನ್ನು ಆಯ್ಕೆ ಮಾಡಿತ್ತು. ಸೆಪ್ಟಂಬರ್ 25ರಂದು ನಡೆದಿದ್ದ ಪಂದ್ಯದಲ್ಲಿ 4 ಓವರ್ ಎಸೆದಿದ್ದ ಬುಮ್ರಾ, 50 ರನ್ ಕೊಟ್ಟು ದುಬಾರಿಯಾಗಿದ್ದರು. ಬುಮ್ರಾ ವೃತ್ತಿ ಜೀವನದಲ್ಲೇ ಇದು ಅತ್ಯಂತ ದುಬಾರಿ ಸ್ಪೆಲ್ ಆಗಿತ್ತು.

ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪ್ರಮುಖ ಆಲ್ರೌಡರ್ ರವೀಂದ್ರ ಜಡೇಜಾ ಸಹ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.

ಭಾರತದ ಪರ 17 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ಶಮಿ, 18 ವಿಕೆಟ್ಗಳನ್ನು ಪಡೆದಿದ್ದಾರೆ. 2021ರಲ್ಲಿ ಯುಎಇಯಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಶಮಿ ಕೊನೆಯದಾಗಿ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದಾರೆ.

ಈಗಾಗಲೇ ಆಸ್ಟ್ರೇಲಿಯಾ ತಲುಪಿರುವ ರೋಹಿತ್ ಶರ್ಮಾ, ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಿದ್ದು, ತಲಾ ಒಂದು ಪಂದ್ಯವನ್ನು ಗೆದ್ದು, ಒಂದರಲ್ಲಿ ಸೋತಿದೆ. ಅಕ್ಟೋಬರ್ 17 ರಂದು ಆಸ್ಟ್ರೇಲಿಯಾ ಮತ್ತು ಅಕ್ಟೋಬರ್ 19 ರಂದು ನ್ಯೂಜಿಲೆಂಡ್ ವಿರುದ್ಧ ಮತ್ತೆ ಎರಡು ಅಭ್ಯಾಸ ಪಂದ್ಯಗಳನ್ನಾಡಲಿದೆ.

ಟಿ20 ವಿಶ್ವಕಪ್ 2022| ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ , ಆರ್. ಅಶ್ವಿನ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್ದೀಪ್, ಮುಹಮ್ಮದ್ ಶಮಿ.

Join Whatsapp