ಟಿ20 ವಿಶ್ವಕಪ್‌ನ ʻಮಾಡು ಇಲ್ಲವೇ ಮಡಿʼ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಇಂಗ್ಲೆಂಡ್ 20 ರನ್‌ಗಳ ಅಂತರದಲ್ಲಿ ಮಣಿಸಿದೆ. ಆ ಮೂಲಕ ಗ್ರೂಪ್ 1ರ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದ ಜಾಸ್ ಬಟ್ಲರ್ ಬಳಗ, ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಮತ್ತು ಶ್ರೀಲಂಕಾ ತಂಡವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿದಿದೆ.
ಬ್ರಿಸ್ಬೇನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವಿಗೆ ಇಂಗ್ಲೆಂಡ್ 180 ರನ್‌ಗಳ ಗೆಲುವಿನ ಗುರಿ ನೀಡಿತ್ತು. ಗ್ಲೆನ್ ಫಿಲಿಪ್ಸ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಹೋರಾಟದ ಹೊರತಾಗಿಯೂ ಕಿವೀಸ್, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 159 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.
ಈ ಪಂದ್ಯದ ಬಳಿಕ ಸೂಪರ್ 12ರ ಗ್ರೂಪ್ 1ರಲ್ಲಿ ಸೆಮಿಫೈನಲ್‌ನ 2 ಸ್ಥಾನಗಳಿಗೆ 4 ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡಗಳು ತಲಾ 5 ಪಂದ್ಯಗಳನ್ನು ಆಡಿದ್ದು 2 ಗೆಲುವು, 1 ಸೋಲು, 1 ಡ್ರಾದೊಂದಿಗೆ ತಲಾ 5 ಅಂಕಗಳನ್ನು ಹೊಂದಿದೆ. 4 ಪಂದ್ಯಗಳಲ್ಲಿ 2 ಸೋಲು 2 ಗೆಲುವು ಕಂಡಿರುವ ಶ್ರೀಲಂಕಾ 4 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ.
ಸೂಪರ್ 12 ಹಂತದ ಆಸ್ಟ್ರೇಲಿಯ- ಇಂಗ್ಲೆಂಡ್ ನಡುವಣ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ ಉಭಯ ತಂಡಗಳು ಅಂಕಗಳನ್ನು ಹಂಚಿಕೊಂಡಿದ್ದವು. ಇದಕ್ಕೂ ಮೊದಲಿನ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಹೊಸ್ತಿಲಲ್ಲಿದ್ದ ಇಂಗ್ಲೆಂಡ್, ಡಕ್‌ವರ್ಥ್ ಲೂಯಿಸ್ ನಿಯಮದಿಂದಾಗಿ ಸೋಲು ಕಾಣುವಂತಾಗಿತ್ತು. ಆದರೂ ಹೋರಾಟ ಕೈಬಿಡದ ಇಂಗ್ಲೆಂಡ್ ಇದೀಗ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ.
ಗ್ರೂಪ್ 1ರಲ್ಲಿ ಎಲ್ಲಾ 6 ತಂಡಗಳು ತಲಾ 4 ಪಂದ್ಯಗಳನ್ನಾಡಿದ್ದು, ಉಳಿದಿರುವ 1 ಪಂದ್ಯ ಮಳೆಯಿಂದಾಗಿ ರದ್ದಾದರೆ ರನ್ ರೇಟ್ ಆಧಾರದಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆಯಲಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಮತ್ತು ಏಷ್ಯಾ ಕಪ್ ಚಾಂಪಿಯನ್ ಶ್ರೀಲಂಕಾ ಟೂರ್ನಿಯಲ್ಲಿ ತಮ್ಮ ಅಭಿಯಾನ ಕೊನೆಗೊಳಿಸಲಿದೆ.
ನ್ಯೂಜಿಲೆಂಡ್‌ಗೆ ಮೊದಲ ಸೋಲು
ಬ್ರಿಸ್ಬೇನ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್, ಆರಂಭಿಕರಾದ ನಾಯಕ ಜಾಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಗಳಿಸಿದ ಬಿರುಸಿನ ಅರ್ಧಶತಕಗಳ ನೆರವಿನಿಂದ 6 ವಿಕೆಟ್ ನಷ್ಟದಲ್ಲಿ 179 ರನ್ ಗಳಿಸಿತ್ತು. ಆದರೆ ಆಂಗ್ಲನ್ನರ ಶಿಸ್ತಿನ ಬೌಲಿಂಗ್ ಮತ್ತು ಕ್ಷೇತ್ರ ರಕ್ಷಣೆಯೆದುರು 6 ವಿಕೆಟ್ ನಷ್ಟದಲ್ಲಿ 159 ರನ್‌ಗಳನ್ನಷ್ಟೇ ಕಿವೀಸ್ ಬ್ಯಾಟ್ಸ್‌ಮನ್‌ಗಳಿಗೆ ಸಾಧ್ಯವಾಯಿತು.
ಶ್ರೀಲಂಕಾ ವಿರುದ್ಧದ ಕಳೆದ ಪಂದ್ಯದಲ್ಲಿ ಶತಕ ದಾಖಲಿಸಿ ಮಿಂಚಿದ್ದ ಗ್ಲೆನ್ ಫಿಲಿಪ್ಸ್, ಮಂಗಳವಾರವೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದರು. 36 ಎಸೆತಗಳನ್ನು ಎದುರಿಸಿದ ಬಟ್ಲರ್, 4 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 62 ರನ್ ಗಳಿಸಿ ನಿರ್ಗಮಿಸಿದರು. 25 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದ ಫಿಲಿಪ್ಸ್, ಇಂಗ್ಲೆಂಡ್ ಗೆಲುವಿಗೆ ಅಡ್ಡಿಯಾಗುವ ಸೂಚನೆ ನೀಡಿದ್ದರು. ಆದರೆ ಸ್ಯಾಮ್ ಕರ್ರನ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಮತ್ತೊಂದು ತುದಿಯಲ್ಲಿ ತಾಳ್ಮೆಯ ಆಟವಾಡಿದ ನಾಯಕ ವಿಲಿಯಮ್ಸನ್ 40 ಎಸೆತಗಳಲ್ಲಿ 40 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 4 ಓವರ್‌ಗಳಲ್ಲಿ 2 ಪ್ರಮುಖ ವಿಕೆಟ್ ಪಡೆದ ಎಡಗೈ ವೇಗಿ ಸ್ಯಾಮ್ ಕರ್ರನ್, ಇಂಗ್ಲೆಂಡ್ ಪಾಲಿಗೆ ಗೆಲುವಿನ ರುವಾರಿಯಾದರು.