ಇಂದು ಟಿ20 ವಿಶ್ವಕಪ್ ಕ್ಲೈಮ್ಯಾಕ್ಸ್: ಭಾರತ ಹಾಗೂ ದಕ್ಷಿಣ ಆಪ್ರಿಕಾ ಹೋರಾಟ

Prasthutha|

ಬಾರ್ಬಡೋಸ್: ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2024 ಇದರ ಕ್ಲೈಮ್ಯಾಕ್ಸ್ ಇಂದು ನಡೆಯಲಿದೆ. 2007ರ ಮೊದಲ ಆವೃತ್ತಿಯ ವಿಶ್ವಕಪ್ ನಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡ 17 ವರ್ಷಗಳ ಬಳಿಕ ಇದೇ ಮೊದಲ ಬಾರಿ ಫೈನಲ್ ನಲ್ಲಿ ಸ್ಪರ್ಧಿಸುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ಹೋರಾಡಲಿದೆ.

- Advertisement -

ಉಭಯ ತಂಡಗಳು 2014ರ ಟಿ20 ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದು, ಭಾರತ ಜಯ ಸಾಧಿಸಿತ್ತು.

ಭಾರತ ಕ್ರಿಕೆಟ್ ತಂಡ 2007ರಲ್ಲಿ ಮೊತ್ತ ಮೊದಲ ಟಿ20 ವಿಶ್ವಕಪ್ ಜಯಿಸಿತ್ತು. 2011ರ ನಂತರ ಭಾರತವು ವಿಶ್ವಕಪ್ ಪ್ರಶಸ್ತಿ ಜಯಿಸಿಲ್ಲ. 2013ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕೊನೆಯ ಬಾರಿ ಭಾರತ ಐಸಿಸಿ ಪ್ರಶಸ್ತಿ ಜಯಿಸಿತ್ತು. 2014ರ ಟಿ20 ವಿಶ್ವಕಪ್ ನಲ್ಲಿ ಫೈನಲ್ ಗೆ ತಲುಪಿದ್ದ ಭಾರತವು 2016 ಹಾಗೂ 2022ರಲ್ಲಿ ಸೆಮಿ ಫೈನಲ್ ಗೆ ತಲುಪಿತ್ತು. 2015 ಹಾಗೂ 2019ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಸೆಮಿ ಫೈನಲ್ ಗೆ ತಲುಪಿದ್ದ ಭಾರತ ಹಲವು ಬಾರಿ ಫೈನಲ್ ಗೆ ತಲುಪಲು ಯತ್ನಿಸಿದೆ. ಕಳೆದ ವರ್ಷ ತಾಯ್ನಾಡಿನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ನಲ್ಲಿ ಅಜೇಯ ದಾಖಲೆಯೊಂದಿಗೆ ಫೈನಲ್ ಗೆ ತಲುಪಿದ್ದ ರೋಹಿತ್ ಪಡೆ ಆಸ್ಟ್ರೇಲಿಯ ವಿರುದ್ಧ ಆಘಾತಕಾರಿ ಸೋಲುಂಡಿತ್ತು. ಒಂದು ವರ್ಷದೊಳಗೆ ತನಗಾಗಿರುವ ಗಾಯವನ್ನು ಗುಣಪಡಿಸಿಕೊಳ್ಳುವ ಹಾಗೂ ಜಾಗತಿಕ ಟೂರ್ನಿಗಳಲ್ಲಿ ಎದುರಿಸುತ್ತಿರುವ ಪ್ರಶಸ್ತಿ ಬರ ನೀಗಿಸಿಕೊಳ್ಳುವ ಅಪೂರ್ವ ಅವಕಾಶ ಭಾರತಕ್ಕೆ ಒದಗಿ ಬಂದಿದೆ.

- Advertisement -

ಭಾರತ ಕೆನಡಾ ವಿರುದ್ಧದ ಪಂದ್ಯ ಹೊರತುಪಡಿಸಿ ಪಾಕಿಸ್ತಾನ, ಐರ್ಲ್ಯಾಂಡ್ ಹಾಗೂ ಅಮೆರಿಕ ವಿರುದ್ಧ ಜಯಿಸಿದೆ. ಲೌಡರ್ಹಿಲ್ ನಲ್ಲಿ ಕೆನಡಾ ವಿರುದ್ಧ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಸೂಪರ್-8 ಹಂತದಲ್ಲಿ ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯ ವಿರುದ್ಧ ಜಯ ಸಾಧಿಸಿದ್ದ ಭಾರತ ಗ್ರೂಪ್-1ರಲ್ಲಿ ಅಗ್ರ ಸ್ಥಾನ ಪಡೆದಿತ್ತು. ಸೆಮಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ಗೆ ಸೋಲುಣಿಸಿ 10 ವರ್ಷಗಳ ನಂತರ ಟಿ20 ವಿಶ್ವಕಪ್ ನಲ್ಲಿ ಫೈನಲ್ ಗೆ ತಲುಪಿದೆ.

ದಕ್ಷಿಣ ಆಫ್ರಿಕಾ ಟೂರ್ನಿಯಲ್ಲಿ ಸತತ 8 ಪಂದ್ಯಗಳನ್ನು ಜಯಿಸಿದೆ. ಗ್ರೂಪ್ ಹಂತದಲ್ಲಿ ಶ್ರೀಲಂಕಾ, ನೆದರ್ಲ್ಯಾಂಡ್ಸ್, ಬಾಂಗ್ಲಾದೇಶ ಹಾಗೂ ನೇಪಾಳದ ವಿರುದ್ಧ ಜಯ ಸಾಧಿಸಿತ್ತು. ಸೂಪರ್-8 ಪಂದ್ಯದಲ್ಲಿ ಅಮೆರಿಕ, ಇಂಗ್ಲೆಂಡ್ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧ ಜಯ ಸಾಧಿಸಿದ್ದ ತಂಡ ಸೆಮಿ ಫೈನಲ್‌ನಲ್ಲಿ ಅಫ್ಘಾನಿಸ್ತಾನವನ್ನು 9 ವಿಕೆಟ್ ಗಳಿಂದ ಮಣಿಸಿ ಮೊದಲ ಬಾರಿ ಫೈನಲ್ ಗೆ ತಲುಪಿದೆ.

ಏಕದಿನ ಹಾಗೂ ಟಿ20 ವಿಶ್ವಕಪ್ ನಲ್ಲಿ ಏಳು ಬಾರಿ ಸೆಮಿ ಫೈನಲ್ ನಲ್ಲಿ ಸೋಲನುಭವಿಸಿದ್ದ ದಕ್ಷಿಣ ಆಫ್ರಿಕಾ ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿದೆ.



Join Whatsapp