ಐಸಿಸಿ T-20 ವಿಶ್ವಕಪ್; ಮಿಲ್ಲರ್ “ಲಂಕಾದಹನ”..!

Prasthutha|

ಶಾರ್ಜಾ: ಸೋಲಿನ ಸುಳಿಗೆ ಸಿಲುಕಿದ್ದ ದಕ್ಷಿಣ ಆಫ್ರಿಕಾ ತಂಡವನ್ನು ಕೊನೆಯ ಓವರ್’ನಲ್ಲಿ ಎರಡು ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಡೇವಿಡ್ ಮಿಲ್ಲರ್ ಗೆಲುವಿನ ದಡ ಸೇರಿಸಿದ್ದಾರೆ.
ಐಸಿಸಿ T-20 ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ನಡೆದ ಸೂಪರ್-12 ಹಂತದ ಮಹತ್ವದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ 4 ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ

- Advertisement -

ಶಾರ್ಜಾದ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಶನಿವಾರ ನಡೆದ ಸೂಪರ್-12 ಹಂತದ ಮಹತ್ವದ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 142ರನ್’ಗಳ ಗುರಿಯನ್ನು ದಕ್ಷಿಣ ಆಫ್ರಿಕಾ 6 ವಿಕೆಟ್ ನಷ್ಟದಲ್ಲಿ ಇನ್ನೂ ಒಂದು ಎಸೆತ ಬಾಕಿಯಿರುವಂತೆಯೇ ಗೆದ್ದು ಬೀಗಿತು.
ಚೇಸಿಂಗ್ ವೇಳೆ ದಕ್ಷಿಣ ಆಫ್ರಿಕಾ ಗೆಲುವಿಗೆ ಅಂತಿಮ ಓವರ್’ನಲ್ಲಿ 15 ರನ್’ಗಳ ಅಗತ್ಯವಿತ್ತು. ಲಹಿರು ಕುಮಾರ ಎಸೆದ ಓವರ್’ನ ದ್ವಿತೀಯ ಹಾಗೂ ತೃತೀಯ ಎಸೆತವನ್ನು ಸಿಕ್ಸರ್’ಗೆ ಅಟ್ಟಿದ ಡೇವಿಡ್ ಮಿಲ್ಲರ್ ಲಂಕಾ ಪಾಲಿಗೆ ಮ್ಯಾಚ್ ಕಿಲ್ಲರ್ ಆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬೌಲಿಂಗ್‌ ನಿರ್ಧಾರ ಕೈಗೊಂಡ ದಕ್ಷಿಣ ಆಫ್ರಿಕಾ ಬೌಲರ್’ಗಳ ಎದುರು ಲಂಕಾ ಬ್ಯಾಟಿಂಗ್ ಪಡೆ ಪೆವಿಲಿಯನ್ ಪರೇಡ್ ನಡೆಸಿತು. ಇಬ್ಬರು ಶೂನ್ಯಕ್ಕೆ ಮರಳಿದರೆ, ಐವರು ಬ್ಯಾಟರ್ಸ್ ಎರಡಂಕೆಯನ್ನು ತಲುಪಲಿಲ್ಲ. ಆದರೆ ಆರಂಭಿಕನಾಗಿ ಕಣಕ್ಕಿಳಿದು ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಪಾತುಮ್ ನಿಸ್ಸಾಂಕ 58 ಎಸೆತಗಳನ್ನು ನಿಭಾಯಿಸಿ 3 ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನಿಂದ 72 ರನ್’ಗಳಿಸಿ ಇನ್ನಿಂಗ್ಸ್‌ನ 19ನೇ ಓವರ್’ನಲ್ಲಿ ಪ್ರಿಟೋರಿಯಸ್’ಗೆ ವಿಕೆಟ್ ಒಪ್ಪಿಸಿದರು.

- Advertisement -

ಅಂತಿಮವಾಗಿ ಲಂಕಾ ನಿಗದಿತ 20 ಓವರ್‌ಗಳಲ್ಲಿ 140 ರನ್’ಗಳಿಗೆ ಆಲೌಟ್ ಆಗಿತ್ತು.
ದಕ್ಷಿಣ ಆಫ್ರಿಕಾ ಪರ ತಬ್ರೆಝ್ ಶಂಸಿ ಹಾಗೂ ಪ್ರಿಟೋರಿಯಸ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.
ನಾಯಕ‌ ತೆಂಬು ಬವುಮಾ 46 ರನ್’ಗಳಿಸಿದರೆ ಡೆವಿಡ್ ಮಿಲ್ಲರ್ 13 ಎಸೆತಗಳಲ್ಲಿ 2 ನಿರ್ಣಾಯಕ ಸಿಕ್ಸರ್ ನೆರವಿನಿಂದ 23 ರನ್’ಗಳಿಸಿ ಅಜೇಯರಾಗುಳಿದರು.
ಶ್ರೀಲಂಕಾ ಬೌಲಿಂಗ್‌ನಲ್ಲಿ ವಾನಿಂದು ಹಸರಂಗ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಮಿಂಚಿದರು. 4 ಓವರ್’ನಲ್ಲಿ 20 ರನ್ ಬಿಟ್ಟುಕೊಟ್ಟ ಹಸರಂಗ, ಹ್ಯಾಟ್ರಿಕ್ ಸಾಧನೆಯ ನಡುವೆಯೂ ಲಂಕಾ ತಂಡ ಸೋಲು ಕಂಡಿತ್ತು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.
ಇದರೊಂದಿಗೆ ಒಂದನೇ ಗುಂಪಿನಲ್ಲಿ
ಆಡಿರುವ 3 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಎರಡನೇ ಗೆಲುವು ದಾಖಲಿಸಿದೆ.
ಮತ್ತೊಂದೆಡೆ 3 ಪಂದ್ಯಗಳಲ್ಲಿ ಶ್ರೀಲಂಕಾ ಎರಡನೇ ಸೋಲು ಕಂಡಿದೆ.



Join Whatsapp