ಲಕ್ನೋ: ಉತ್ತರ ಪ್ರದೇಶದ ಬಾಬಿನಾ ಫೀಲ್ಡ್ ಫೈರಿಂಗ್ ರೇಂಜ್ ನಲ್ಲಿ ಗುಂಡಿನ ದಾಳಿ ವೇಳೆ ಟಿ-90 ಟ್ಯಾಂಕ್ ಬ್ಯಾರೆಲ್ ಸ್ಫೋಟಗೊಂಡ ಪರಿಣಾಮ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಸೇರಿದಂತೆ ಇಬ್ಬರು ಭಾರತೀಯ ಸೇನಾ ಸಿಬ್ಬಂದಿ ಮೃತಪಟ್ಟಿರುವುದಾಗಿ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಝಾನ್ಸಿ ಬಳಿಯ ಬಬೀನಾ ಕಂಟೋನ್ಮೆಂಟ್ ನಲ್ಲಿ ಫೀಲ್ಡ್ ಫೈರಿಂಗ್ ತಾಲೀಮು ವೇಳೆ ಈ ಘಟನೆ ಸಂಭವಿಸಿದೆ. ತಕ್ಷಣ ಗಾಯಗೊಂಡ ಮೂವರನ್ನು ಮಿಲಿಟರಿ ಆಸ್ಪತ್ರೆ ಬಬೀನಾಗೆ ದಾಖಲಿಸಲಾಯಿತು. ಕಮಾಂಡರ್ ಮತ್ತು ಗನ್ನರ್ ಮೃತಪಟ್ಟಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಲಾಗಿದೆ ಎಂದು ಭಾರತೀಯ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಯೋಧರ ಕುಟುಂಬಗಳಿಗೆ ಭಾರತೀಯ ಸೇನೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.