ದುಬೈ ; ಅಬುಧಾಬಿ: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ದುಬೈ ಸ್ಪೋರ್ಟ್ಸ್ ಸಿಟಿಯ ಐಸಿಸಿ ಅಕಾಡೆಮಿ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ
ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್’ಗೆ ಆಹ್ವಾನಿಸಿದರು.
ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಇಂಗ್ಲೆಂಡ್, 188 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.
ರನ್ ಚೇಸಿಂಗ್ ವೇಳೆ ಇಶಾನ್ ಕಿಶನ್ (70) ಹಾಗೂ ಕೆ.ಎಲ್. ರಾಹುಲ್ (51) ಬಿರುಸಿನ ಅರ್ಧಶತಕಗಳ ನೆರವಿನಿಂದ 19 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಟೀಮ್ ಇಂಡಿಯಾ ಗುರಿ ತಲುಪಿತು.
ಆರಂಭದಲ್ಲಿಯೇ ಆಕ್ರಮಣಕಾರಿ ಬ್ಯಾಟಿಂಗ್’ಗೆ ಇಳಿದ ಇಶಾನ್ ಇಶಾನ್ 36 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗಳಿಸಿದರು. 46 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 70 ರನ್ ಗಳಿಸಿದ್ದ ವೇಳೆ ಇಶಾನ್ ಗಾಯದಿಂದ ನಿವೃತ್ತಿಯಾದರು.
ಮತ್ತೋರ್ವ ಓಪನರ್ ಕನ್ನಡಿಗ ಕೆ.ಎಲ್.ರಾಹುಲ್, 23 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಮಿಂಚಿದರು. ರಾಹುಲ್ ಇನ್ನಿಂಗ್ಸ್‌ನ್ 3 ಭರ್ಜರಿ ಸಿಕ್ಸರ್ ಹಾಗೂ 6 ಬೌಂಡರಿಗಳನ್ನು ಒಳಗೊಂಡಿತ್ತು.
ಬಳಿಕ ಬಂದ ಕೊಹ್ಲಿ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.
11 ರನ್’ಗಳಿಸಿ ಲಿವಿಂಗ್’ಸ್ಟನ್ ಬೌಲಿಂಗ್‌ನಲ್ಲಿ ರಶೀದ್’ಗೆ ಕ್ಯಾಚಿತ್ತು ನಿರ್ಗಮಿಸಿದರು.
ಸೂರ್ಯಕುಮಾರ್ ಯಾದವ್ (8) ನಿರಾಸೆ ಮೂಡಿಸಿದರು. ಆದರೆ ಕೊನೆಯ ಹಂತದಲ್ಲಿ ರಿಷಭ್ ಪಂತ್ (29* ರನ್, 14 ಎಸೆತ) ಹಾಗೂ ಹಾರ್ದಿಕ್ ಪಾಂಡ್ಯ (12* ರನ್) ತಂಡವನ್ನು ಗೆಲುವಿನ ದಡ ಸೇರಿಸಿದರು.
ಈ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಜಾನಿ ಬೆಸ್ಟೊ (49), ಮೊಯಿನ್ ಅಲಿ (43*) ಹಾಗೂ ಲಿವಿಂಗ್‌ಸ್ಟೋನ್ (30) ಬಿರುಸಿನ ಆಟದ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತ್ತು.
ಐಪಿಎಲ್’ನಲ್ಲಿ ಕೆಕೆಆರ್ ತಂಡವನ್ನು ಫೈನಲ್‌ನಲ್ಲಿ ಮುನ್ನಡೆಸಿದ್ದ ಕಾರಣಕ್ಕಾಗಿ ಇಂಗ್ಲೆಂಡ್ ತಂಡದ ನಾಯಕ ಮಾರ್ಗನ್‌ಗೆ ವಿಶ್ರಾಂತಿ ನೀಡಲಾಗಿತ್ತು. ಮಾರ್ಗನ್ ಬದಲಾಗಿ ಜೋಸ್ ಬಟ್ಲರ್ ತಂಡವನ್ನು ಮುನ್ನಡೆಸಿದ್ದರು. .
ಅಂತಿಮ ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮೂಯಿನ್ ಅಲಿ ಕೇವಲ 20 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 43 ರನ್’ಗಳಿಸಿ ತಂಡದ ಮೊತ್ತ 180ರ ಗಡಿ ದಾಟಿಸಿದರು.ಭಾರತದ ಪರ ಮೊಹಮ್ಮದ್ ಶಮಿ 3 ವಿಕೆಟ್ ಪಡೆದು ಮಿಂಚಿದರು. 4 ಓವರ್ ಎಸೆದು
54 ರನ್ ಬಿಟ್ಟುಕೊಟ್ಟ ಭುವನೇಶ್ವರ್ ಕುಮಾರ್ ದುಬಾರಿಯೆನಿಸಿದರು.