ನ್ಯೂಯಾರ್ಕ್: ಇಲ್ಲಿನ ನಾಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಅಮೆರಿಕವನ್ನು ಮಣಿಸಿ ಸೂಪರ್ 8 ಪ್ರವೇಶಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಅಮೆರಿಕ ನೀಡಿದ ಸುಲಭ ಗುರಿಯನ್ನು ಭಾರತ 18.2 ಓವರ್ನಲ್ಲಿ ತಲುಪಿತು. 3 ವಿಕೆಟ್ ಕಳೆದುಕೊಂಡು 111 ರನ್ ಬಾರಿಸಿ ಗೆಲುವಿನ ದಡ ಸೇರಿತು. ಎಡಗೈ ವೇಗಿ ಅರ್ಶದೀಪ್ ಸಿಂಗ್(9ಕ್ಕೆ 4) ಅವರ ಘಾತಕ ಬೌಲಿಂಗ್ ದಾಳಿ ಮತ್ತು ಸೂರ್ಯಕುಮಾರ್ ಯಾದವ್(50 ನಾಟೌಟ್) ಹಾಗೂ ಶಿವಂ ದುಬೆ(31 ನಾಟೌಟ್) ಜೋಡಿಯ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಅಮೆರಿಕ ವಿರುದ್ಧ ಭಾರತ 7 ವಿಕೆಟ್ಗಳ ಗೆಲುವು ಕಂಡಿತು. ಈ ಗೆಲುವಿನೊಂದಿಗೆ ‘ಎ’ ವಿಭಾಗದಿಂದ ಮೊದಲ ತಂಡವಾಗಿ ಸೂಪರ್-8 ಪ್ರವೇಶ ಪಡೆದಿದೆ.
ಟೂರ್ನಿಯಲ್ಲಿ ಭಾರತ ಹ್ಯಾಟ್ರಿಕ್ ಗೆಲುವು ಸಾಧಿಸಿದರೆ, ಆತಿಥೇಯ ಯುಎಸ್‌ಎ ತಂಡವು ಟೂರ್ನಿಯಲ್ಲಿ ಮೊದಲ ಸೋಲಿನ ಕಹಿ ಅನುಭವಿಸಿದೆ.
ಎಡಗೈ ವೇಗಿ ಅರ್ಶ್ದೀಪ್ ಸಿಂಗ್ ಈ ಪಂದ್ಯದಲ್ಲಿ 4 ಓವರ್ ಎಸೆದು ಕೇವಲ 9 ರನ್ಗೆ 4 ವಿಕೆಟ್ ಕಿತ್ತು ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದರು. ಜತೆಗೆ ಟಿ20 ವಿಶ್ವಕಪ್ನಲ್ಲಿ ಭಾರತ ಪರ ಶ್ರೇಷ್ಠ ಬೌಲಿಂಗ್ ನಡೆಸಿದ ಆಟಗಾರ ಎನ್ನುವ ಹಿರಿಮೆಗೂ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಅಶ್ವಿನ್ ಹೆಸರಿನಲ್ಲಿತ್ತು. ಅಶ್ವಿನ್ ಅವರು 2014ರ ಟೂರ್ನಿಯಲ್ಲಿ 11ರನ್ಗೆ 4 ವಿಕೆಟ್ ಕೆಡವಿದ್ದರು.