ಸೈಯದ್ ಮುಷ್ತಾಕ್ ಅಲಿ T-20 : ಚಾಂಪಿಯನ್ ಪಟ್ಟಕ್ಕಾಗಿ ಕರ್ನಾಟಕ-ತಮಿಳುನಾಡು ಹಣಾಹಣಿ

Prasthutha|

ನವದೆಹಲಿ: ಸೈಯದ್ ಮುಷ್ತಾಕ್ ಅಲಿ T-20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೋಮವಾರ ಕರ್ನಾಟಕ, ಹಾಲಿ ಚಾಂಪಿಯನ್ ತಮಿಳುನಾಡು ತಂಡವನ್ನು ಎದುರಿಸಲಿದೆ.ಮೂರನೇ ಟ್ರೋಫಿ ಮೇಲೆ ಕರ್ನಾಟಕ ಕಣ್ಣಿಟ್ಟಿದ್ದು, ಅತ್ತ 2017ರ ಬಳಿಕ ಕರ್ನಾಟಕದ ವಿರುದ್ಧ ಮೊದಲ ಗೆಲುವಿನ ಗುರಿಯೊಂದಿಗೆ ತಮಿಳುನಾಡು ಕಣಕ್ಕಿಳಿಯಲಿದೆ.

- Advertisement -

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ದಕ್ಷಿಣ ಭಾರತದ ಎರಡೂ ತಂಡಗಳ ನಡುವೆ ರೋಚಕ ಹಣಾಹಣಿ ನಡೆಯುವ ನಿರೀಕ್ಷೆಯಿದೆ.ಟೂರ್ನಿಯ ಇತಿಹಾಸದಲ್ಲಿ ಉಭಯ ತಂಡಗಳು ತಲಾ ಎರಡು ಬಾರಿ ಪ್ರಶಸ್ತಿ ಜಯಿಸಿವೆ. 2019–20ರ ಫೈನಲ್‌ನಲ್ಲಿ ತಮಿಳುನಾಡು ತಂಡವನ್ನು ಕರ್ನಾಟಕ ಮಣಿಸಿತ್ತು. ಆದರೆ ಕಳೆದ ಸಾಲಿನಲ್ಲಿ ತಮಿಳುನಾಡು ಫೈನಲ್‌ನಲ್ಲಿ ಬರೋಡಾ ವಿರುದ್ಧ ಜಯಿಸಿತ್ತು.ಹೀಗಾಗಿ ತಮಿಳುನಾಡು ಸತತ ಮೂರನೇ ಬಾರಿ ಮತ್ತು ಒಟ್ಟಾರೆ ನಾಲ್ಕನೇ ಬಾರಿ ಫೈನಲ್‌ ಪಂದ್ಯವನ್ನಾಡಲಿದೆ.

ಮನೀಷ್ ಪಾಂಡೆ ಬಳಗವು ಬ್ಯಾಟಿಂಗ್ ವಿಭಾಗದ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ರೋಹನ್ ಕದಂ, ಅಭಿನವ್ ಮನೋಹರ್, ಕರುಣ್ ನಾಯರ್, ಅನಿರುದ್ಧ ಜೋಶಿ ಅವರು ಉತ್ತಮ ಲಯದಲ್ಲಿರುವುದು ಬ್ಯಾಟಿಂಗ್‌ನಲ್ಲಿ ಹೆಚ್ಚು ಚಿಂತೆ ಇಲ್ಲ. ಆದರೆ ಹೊಸಪ್ರತಿಭೆಗಳಾದ ವಿದ್ಯಾಧರ್ ಪಾಟೀಲ, ವಿಜಯಕುಮಾರ್ ವೈಶಾಖ,ಎಂ.ಬಿ. ದರ್ಶನ್ ಅವರಿಗೆ ತಮಿಳುನಾಡು ಬ್ಯಾಟಿಂಗ್‌ ಬಲವನ್ನು ಕಟ್ಟಿಹಾಕುವ ಸವಾಲಿದೆ. ಶಾರೂಕ್ ಖಾನ್, ನಾಯಕ ವಿಜಯಶಂಕರ್, ಎಸ್. ಜಗದೀಶನ್ ಅವರು ಬ್ಯಾಟಿಂಗ್‌ ವಿಭಾಗದ ಪ್ರಮುಖರಾಗಿದ್ದಾರೆ.

- Advertisement -

ತಮಿಳುನಾಡು ಬೌಲಿಂಗ್ ವಿಭಾಗವು ಉತ್ತಮವಾಗಿದೆ. ಸೆಮಿಫೈನಲ್‌ನಲ್ಲಿ ಐದು ವಿಕೆಟ್ ಗೊಂಚಲು ಗಳಿಸಿದ ಪಿ. ಸರವಣಕುಮಾರ್ ಮತ್ತು ಸಂದೀಪ್ ವರಿಯರ್ ಉತ್ತಮ ಲಯದಲ್ಲಿದ್ದಾರೆ. ಗಾಯದಿಂದಾಗಿ ಟಿ. ನಟರಾಜನ್ ಕಳೆದೆರಡು ಪಂದ್ಯಗಳಲ್ಲಿ ಆಡಿಲ್ಲ. ಅವರು ಚೇತರಿಸಿಕೊಂಡು ಫೈನಲ್‌ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

Join Whatsapp