►ಟಿವಿ ಮಾಧ್ಯಮಗಳೂ ಕೂಡ ಇಂಥ ದ್ವೇಷ ಭಾಷಣಕ್ಕೆ ತುಪ್ಪ ಸುರಿಯುತ್ತಿದೆ
ಬೆಂಗಳೂರು: ನಮ್ಮ ಸರ್ಕಾರದ ಧರ್ಮವನ್ನು ನೆನಪು ಮಾಡಿದ್ದಕ್ಕೆ ಗಲ್ಫ್ ರಾಷ್ಟ್ರಗಳಿಗೆ ನಿಜಕ್ಕೂ ಥ್ಯಾಂಕ್ಸ್ ಹೇಳಬೇಕು ಎಂದು ನಟಿ ಸ್ವರ ಭಾಸ್ಕರ್ ಹೇಳಿದ್ದಾರೆ.
ಬಿಜೆಪಿ ವಕ್ತಾರೆ ನೂಪುರ್ ಶರ್ಮ ಪ್ರವಾದಿ ಕುರಿತಾಗಿ ನೀಡಿದ ಹೇಳಿಕೆ ಅಂತಾರಾಷ್ಟ್ರೀಯ ವಿವಾದಕ್ಕೆ ಕಾರಣವಾದ ಬಗ್ಗೆ ಹಾಗೂ ಅದಕ್ಕೆ ಸರ್ಕಾರದ ಕ್ರಮದ ಬಗ್ಗೆ ಮಾತನಾಡಿರುವ ನಟಿ, ನಮ್ಮ ಸರ್ಕಾರದ ಧರ್ಮವನ್ನು ಗಲ್ಫ್ ರಾಷ್ಟ್ರಗಳು ನೆನಪಿಸಿವೆ. ಅದಕ್ಕಾಗಿ ಆ ರಾಷ್ಟ್ರಗಳಿಗೆ ನಾವು ಥ್ಯಾಂಕ್ಸ್ ಹೇಳಬೇಕು. ಬಿಜೆಪಿ ದ್ವೇಷ ಭಾಷಣವನ್ನೇ ಚುನಾವಣೆಯನ್ನು ಗೆಲ್ಲುವ ಟೂಲ್ ಆಗಿ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.
ನಾನು ಯಾವುದೇ ರಾಜಕೀಯ ವಿಶ್ಲೇಷಕಿಯಾಗಿ ಮಾತನಾಡೋದಿಲ್ಲ. ದೇಶದ ಒಬ್ಬ ಮತದಾರಳಾಗಿ, ದೇಶದ ಪ್ರಜೆಯಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ವ್ಯಕ್ತಿಯಾಗಿ ಮಾತನಾಡುತ್ತಿದ್ದೇನೆ. ಇಂದು ನಾವು ಯಾವ ಸ್ಥಿತಿಯಲ್ಲಿದ್ದೇವೆಂದರೆ, ದ್ವೇಷ ಹಾಗೂ ದ್ವೇಷ ಭಾಷಣ ನಮ್ಮ ನಡುವೆ ಸರ್ವೇ ಸಾಮಾನ್ಯವಾಗಿದೆ. ಇದಕ್ಕೆ ದೇಶದಲ್ಲಿ ಆಡಳಿತದಲ್ಲಿರುವ ಪಕ್ಷ ಪ್ರಮುಖವಾಗಿ ಕಾರಣ. ಬಿಜೆಪಿ ತನ್ನ ಚುನಾವಣೆಗಳನ್ನು ಗೆಲ್ಲಲು ದ್ವೇಷ ಭಾಷಣವನ್ನು ಟೂಲ್ ಆಗಿ ಮಾಡಿಕೊಂಡಿದೆ. ಟಿಆರ್ ಪಿ ಹಿಂದೆ ಬಿದ್ದಿರುವ ಮಾಧ್ಯಮಗಳೂ ಕೂಡ ಇಂಥ ದ್ವೇಷ ಭಾಷಣಕ್ಕೆ ದೊಡ್ಡ ಮಟ್ಟದಲ್ಲಿ ತುಪ್ಪ ಸುರಿಯುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.